ಕೊರೋನಾ ಹೊಡೆತಕ್ಕೆ ಕಂಗೆಟ್ಟ ಕಾರ್ಮಿಕರು : ಧಾರವಾಡದ ಟಾಟಾ ಮಾರ್ಕೊಪೊಲೊ ಕಂಪನಿ ಎಂಟು ದಿನ ಬಂದ್

ಕಾರ್ಮಿಕರು, ಸಿಬ್ಬಂದಿ ಹಾಗೂ ಕಂಪನಿಯ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಎಂಟು ದಿನಗಳ ಕಾಲ ಕೈಗಾರಿಕಾ ಘಟಕದ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಕಾರ್ಖಾನೆ ಆಡಳಿತ ಮಂಡಳಿ ಸ್ವಯಂ ಪ್ರೇರಿತ ನಿರ್ಣಯ ತೆಗೆದುಕೊಂಡಿದೆ.

news18-kannada
Updated:July 26, 2020, 3:10 PM IST
ಕೊರೋನಾ ಹೊಡೆತಕ್ಕೆ ಕಂಗೆಟ್ಟ ಕಾರ್ಮಿಕರು : ಧಾರವಾಡದ ಟಾಟಾ ಮಾರ್ಕೊಪೊಲೊ ಕಂಪನಿ ಎಂಟು ದಿನ ಬಂದ್
ಸಾಂದರ್ಭಿಕ ಚಿತ್ರ.
  • Share this:
ಹುಬ್ಬಳ್ಳಿ(ಜುಲೈ.26): ಧಾರವಾಡದ ಹೊರ ವಲಯದ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಇರುವ ಟಾಟಾ ಮಾರ್ಕೊಪೊಲೊ ಕಂಪನಿಯನ್ನು(ಜುಲೈ 26) ಇಂದಿನಿಂದ ಬರುವ ಆಗಸ್ಟ್ 3 ರವರೆಗೆ ಮುಚ್ಚಲು ಕಾರ್ಖಾನೆಯ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಕುರಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರೊಂದಿಗೆ ಕಂಪನಿಯ ಸಿಇಓ ಅವರು ಸಭೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳ ಜೊತೆಗಿನ ಚರ್ಚೆಯ ನಂತರ ಬಂದ್ ತೀರ್ಮಾನ ಕೈಗೊಳ್ಳಲಾಗಿದೆ.

ಕಂಪನಿಯ ಕಾರ್ಮಿಕರಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಸ್ಯಾನಿಟೈಸೇಷನ್, ತಪಾಸಣೆ ನಿರಂತರವಾಗಿ ನಡೆಸಲಾಗುತ್ತಿದೆ. ಕಾರ್ಮಿಕರು, ಸಿಬ್ಬಂದಿ ಹಾಗೂ ಕಂಪನಿಯ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಎಂಟು ದಿನಗಳ ಕಾಲ ಕೈಗಾರಿಕಾ ಘಟಕದ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಕಾರ್ಖಾನೆ ಆಡಳಿತ ಮಂಡಳಿ ಸ್ವಯಂ ಪ್ರೇರಿತ ನಿರ್ಣಯ ತೆಗೆದುಕೊಂಡಿದೆ.

ಕೊರೋನಾ ಒಂದು ದುರ್ಬಲ ವೈರಾಣುವಾಗಿದೆ, ಸರಳ ಚಿಕಿತ್ಸೆ ಮೂಲಕ ಸೋಂಕು ನಿವಾರಿಸಿ ಕೊಳ್ಳಬಹುದಾಗಿದೆ ಕೊರೊನಾ ಭಯದಿಂದ ಯಾರೊಬ್ಬರೂ ಧೃತಿಗೆಡಬಾರದು, ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸೋಂಕಿತರಿಗೆ ಮತ್ತು ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ನಿರಂತರವಾಗಿ ದೂರವಾಣಿ ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ, ದೂರವಾಣಿ ಸಂಪರ್ಕ ಲೈನ್ ಗಳ ಸಂಖ್ಯೆ ಇನ್ನಷ್ಟು ಹೆಚ್ಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ‌ ಪಾಟೀಲ ತಿಳಿಸಿದ್ದಾರೆ.ಧಾರವಾಡ ಮಾನಸಿಕ  ಆರೋಗ್ಯವಿಜ್ಞಾನ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ಮತ್ತು ಆಯುಷ್ ವಿಭಾಗಗಳ ಮೂಲಕ ಮನೋ ಸ್ವಾಸ್ಥ್ಯ ನಿರ್ವಹಣೆಗೆ ವಿಡಿಯೋ ಸಂವಾದದ ಮೂಲಕ ಅಗತ್ಯ ಸಲಹೆಗಳನ್ನು ನೀಡಲಾಗುತ್ತಿದೆ. ಯೋಗಾಭ್ಯಾಸ ಮಾಡಿಸಲಾಗುತ್ತಿದೆ. ಜಿಲ್ಲೆಯ ಜನತೆ ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಹೊಸ ರಸ್ತೆ ಮಾಡಿದ 15 ದಿನಕ್ಕೆ ಪ್ಯಾಚ್ ವರ್ಕ ; ಕಳಪೆ ಕಾಮಗಾರಿಗೆ ಸಾಕ್ಷಿಯಾದ ಸಚಿವರ ಕ್ಷೇತ್ರ

ಧಾರವಾಡ ಜಿಲ್ಲೆಯಲ್ಲಿ ನಿನ್ನೆ 183 ಜನರಿಗೆ ಕೊರೋನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3025ಕ್ಕೆ ಏರಿದೆ. ಕೊರೋನಾ ವೈರಸ್​ಗೆ ನಾಲ್ವರು ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ 89ಕ್ಕೆ ಏರಿದೆ. ಬಿಡುಗಡೆಯಾದವರ ಸಂಖ್ಯೆ 193, ಜಿಲ್ಲೆಯಲ್ಲಿ ಇದುವರೆಗೂ ಬಿಡುಗಡೆಯಾದವರು 1,166, ಜಿಲ್ಲೆಯಲ್ಲಿ ಒಟ್ಟು ಸಕ್ರಿಯ 1770 ಪ್ರಕರಣಗಳು ಇವೆ.

ಕರ್ನಾಟಕದಲ್ಲಿ ಒಟ್ಟು 5072 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. 72 ಮಂದಿ ಬಲಿಯಾಗಿದ್ದಾರೆ. ನಿನ್ನೆ ರಾಜ್ಯಾದ್ಯಂತ 2403 ಮಂದಿ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆ ಮೂಲಕ ಗುಣಮುಖರಾದವರ ಸಂಖ್ಯೆ 33,750ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 90942ಕ್ಕೆ ಏರಿಕೆಯಾಗಿದೆ. ಅವುಗಳಲ್ಲಿ 55,388 ಸಕ್ರಿಯ ಪ್ರಕರಣಗಳಾಗಿವೆ.
Published by: G Hareeshkumar
First published: July 26, 2020, 3:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading