ಕಲಬುರ್ಗಿಯಲ್ಲಿ ಪ್ರವಾಹಕ್ಕೆ 1.40 ಲಕ್ಷ ಹೆಕ್ಟೇರ್ ಬೆಳೆ ಹಾನಿ ; ಹಿಂಗಾರು ಬಿತ್ತನೆ ಮಾಡಲಾಗದೆ ಅಸಹಾಯಕತೆ

ಮಳೆ ಮತ್ತು ಪ್ರವಾಹದಿಂದಾಗಿ ಕೇವಲ ಬೆಳೆಗಳಷ್ಟೇ ಹಾಳಾಗಿಲ್ಲ. ಜೊತೆಗೆ ಹೊಲಗಳೇ ಕೊಚ್ಚಿಕೊಂಡು ಹೋಗಿವೆ. ಭಾರಿ ಪ್ರವಾಹಕ್ಕೆ ದೊಡ್ಡ ಗಾತ್ರದ ಮರಗಳೂ ನೆರಕ್ಕುರುಳಿ ಬಿದ್ದಿವೆ. ಹೊಲದಲ್ಲಿದ್ದ ಮಣ್ಣು ಕೊಚ್ಚಿಕೊಂಡು ಹೋಗಿದೆ.

news18-kannada
Updated:October 24, 2020, 7:29 PM IST
ಕಲಬುರ್ಗಿಯಲ್ಲಿ ಪ್ರವಾಹಕ್ಕೆ 1.40 ಲಕ್ಷ ಹೆಕ್ಟೇರ್ ಬೆಳೆ ಹಾನಿ ; ಹಿಂಗಾರು ಬಿತ್ತನೆ ಮಾಡಲಾಗದೆ ಅಸಹಾಯಕತೆ
ಪ್ರವಾಹಕ್ಕೆ ಬೆಳೆ ಹಾನಿಯಾಗಿರುವುದು
  • Share this:
ಕಲಬುರ್ಗಿ(ಅಕ್ಟೋಬರ್​. 24): ಹಲವು ದಿನಗಳ ಕಾಲ ಉಕ್ಕಿ ಹರಿದ ಭೀಮೆ ಎಲ್ಲರನ್ನೂ ಬಿಕ್ಕುವಂತೆ ಮಾಡಿದೆ. ಭೀಮಾ ನದಿ ಅಬ್ಬರಕ್ಕೆ ಕಲಬುರ್ಗಿ ಜಿಲ್ಲೆ ಅತಿ ಹೆಚ್ಚು ಸಂಕಷ್ಟಕ್ಕೆ ಗುರಿಯಾಗಿದೆ. ಭೀಮಾ ನದಿಯ ಅಕ್ಕ-ಪಕ್ಕದ ಗ್ರಾಮಗಳ ಜಮೀನುಗಳಲ್ಲಿ ವಾರಗಟ್ಟಲೆ ನೀರು ನಿಂತು ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಭೀಮಾ ನದಿ ಜೊತೆಗೆ ಕಾಗಿಣಾ ನದಿ ಅಬ್ಬರ, ಮಳೆಯ ಅವಾಂತರದಿಂದಾಗಿ ಕಲಬುರ್ಗಿಯ ರೈತ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾನೆ. ಜಿಲ್ಲೆಯಲ್ಲಿ ಸುಮಾರು 1.40 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಕಲಬುರ್ಗಿ ಜಿಲ್ಲೆ ಈ ವರ್ಷ ಮಳೆ, ಪ್ರವಾಹಗಳಿಂದ ತತ್ತರಿಸಿ ಹೋಗಿದೆ. ಸರಾಸರಿಗಿಂತ ಎರಡು-ಮೂರು ಪಟ್ಟು ಮಳೆ ಬಂದಿರುವುದು ಒಂದು ಕಡೆಯಾದ್ರೆ, ಭಾರಿ ಪ್ರವಾಹ ಮತ್ತೊಂದು ಕಡೆ. ಭೀಮಾ ನದಿ ಅಬ್ಬರದ ಸಂದರ್ಭದಲ್ಲಿಯೇ ಕಾಗಿಣಾ ನದಿಯೂ ಅಬ್ಬರಿಸಿದ್ದರಿಂದ ಜಿಲ್ಲೆಯ ರೈತ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಭಾರಿ ಮಳೆಯಿಂದಾಗಿ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಎಳ್ಳು ಹಾನಿಗೆ ತುತ್ತಾಗಿತ್ತು. ನಿರಂತರ ಮಳೆ ತೊಗರಿ ಬೆಳೆಗೂ ಕುತ್ತು ತಂದಿತ್ತು. ಇದು ಹೀಗಿರುವಾಗಲೇ ಒಂದು ಕಡೆ ಭೀಮಾ ನದಿ, ಮತ್ತೊಂದು ಕಡೆ ಕಾಗಿಣಾ ನದಿಗಳು ಅಬ್ಬರಿಸಿದವು. ಅದರಲ್ಲಿಯೂ ಭೀಮಾ ನದಿ ಆರ್ಭಟಕ್ಕೆ ನದಿ ಪಾತ್ರದ 160 ಹಳ್ಳಿಯ ಜನ ದಿಕ್ಕೇ ತೋಚದವರಂತಾಗಿದ್ದಾರೆ.

ನದಿ ನೀರು ಜಲಾವೃತಗೊಂಡು, ಬೆಳೆ ರಾಡಿಯುಕ್ತವಾಗಿ ಸಂಪೂರ್ಣ ಕೊಳೆತು ಹೋಗಿದೆ. ಗಿಡದ ರೂಪದಲ್ಲಿ ನಿಂತಿದ್ದರೂ ಅದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಬೇರುಗಳು ಕೊಳೆತು, ನಿಂತಲ್ಲಿಯೇ ಪೈರು ಸೆಟೆದು ಹೋಗಿದೆ. ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕೊಚ್ಚಿ ಹೋಗಿದೆ ಎಂದು ಹಾಗರಗುಂಡಗಿ ಸಂತ್ರಸ್ತ ಸತೀಶ್ ಸಜ್ಜನ್ ಕಣ್ಣೀರು ಹಾಕಿದ್ದಾರೆ.

ಮಳೆ ಮತ್ತು ಪ್ರವಾಹದಿಂದಾಗಿ ಕೇವಲ ಬೆಳೆಗಳಷ್ಟೇ ಹಾಳಾಗಿಲ್ಲ. ಜೊತೆಗೆ ಹೊಲಗಳೇ ಕೊಚ್ಚಿಕೊಂಡು ಹೋಗಿವೆ. ಭಾರಿ ಪ್ರವಾಹಕ್ಕೆ ದೊಡ್ಡ ಗಾತ್ರದ ಮರಗಳೂ ನೆರಕ್ಕುರುಳಿ ಬಿದ್ದಿವೆ. ಹೊಲದಲ್ಲಿದ್ದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಹೊಲ ಎಲ್ಲಿ ಎಂದು ಹುಡುಕುವ ಪರಿಸ್ಥಿತಿ ಕೆಲ ಗ್ರಾಮಗಳಲ್ಲಿ ನಿರ್ಮಾಣವಾಗಿದೆ.

ಅಲ್ಲಿ ಮತ್ತೆ ಬೆಳೆ ಹಾಕಬೇಕೆಂದರೆ ಫಲವತ್ತಾದ ಮಣ್ಣನ್ನು ತಂದು ಹಾಕಬೇಕು. ಹೀಗಾಗಿ ಕೇವಲ ಬೆಳೆ ಪರಿಹಾರ ಕೊಟ್ಟರೆ ಸಾಲುವುದಿಲ್ಲ. ಮಣ್ಣು ಕೊಚ್ಚಿಕೊಂಡು ಹೋದ ಹೊಲಗಳಿಗೆ ಹೆಚ್ಚಿನ ಪರಿಹಾರ ಕೊಡಬೇಕೆಂದು ಕಲಬುರ್ಗಿ ತಾಲೂಕಿನ ರೈತ ಬಾಬು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾನೆ.

ಇದನ್ನೂ ಓದಿ : ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಚಿಂತನೆ: ಬಸವರಾಜ್ ಹೊರಟ್ಟಿ

ಸತತ ಮಳೆ ಇತ್ಯಾದಿ ಕಾರಣದಿಂದಾಗಿ ಈ ಮುಂಚೆ 2.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿತ್ತು. ಆದರೆ, ಅಕ್ಟೋಬರ್ ತಿಂಗಳೊಂದರಲ್ಲಿಯೇ ಕಲಬುರ್ಗಿ ಜಿಲ್ಲೆಯಲ್ಲಿ ಸುಮಾರು 1.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಅದರಲ್ಲಿಯೂ ಮುಖ್ಯವಾಗಿ ತೊಗರಿ ಪೈರಿಗೆ ಅಧಿಕ ಹಾನಿ ಸಂಭವಿಸಿದೆ. ನಂತರದಲ್ಲಿ ಕಬ್ಬು, ಹತ್ತಿ, ಸೋಯಾಬಿನ್ ಬೆಳೆಗಳು ಹಾನಿಗೆ ತುತ್ತಾಗಿವೆ.ಭಾರಿ ಮಳೆ, ಭೀಮಾ ಹಾಗೂ ಕಾಗಿಣಾ ನದಿಗಳು ಏಕಾಏಕಿ ಉಕ್ಕಿ ಹರಿದಿದ್ದರಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿಗೀಡಾಗಿದೆ. ಹಾನಿಯ ಜಂಟಿ ಸರ್ವೆ ಆರಂಭಿಸಿದ್ದು, ಸರ್ಕಾರಕ್ಕೆ ಶೀಘ್ರವೇ ವರದಿ ಸಲ್ಲಿಸಲಿರುವುದಾಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಿತೇಂದ್ರನಾಥ್ ಸೂಗೂರ ಮಾಹಿತಿ ನೀಡಿದ್ದಾರೆ.

ಒಟ್ಟಾರೆ ಮಳೆ ಮತ್ತು ಪ್ರವಾಹದ ಅಬ್ಬರಕ್ಕೆ ಕಲಬುರ್ಗಿ ಜಿಲ್ಲೆಯ ರೈತ ನಡುಗಿ ಹೋಗಿದ್ದಾನೆ. ನದಿ ಪಾತ್ರ ಹಾಗೂ ತಗ್ಗು ಪ್ರದೇಶದಲ್ಲಿ ಬೆಳೆ ಸಂಪೂರ್ಣ ನಾಶವಾಗಿ ಹೋಗಿದೆ. ಆದರೆ, ಹಿಂಗಾರು ಬೆಳೆಯನ್ನೂ ಹಾಕಲಾರದ ಸ್ಥಿತಿ ರೈತನಿಗೆ ನಿರ್ಮಾಣವಾಗಿದ್ದು, ಕೂಡಲೇ ಹಾನಿಯ ಸಮೀಕ್ಷೆ ನಡೆಸಿ, ಹೆಚ್ಚಿನ ಪರಿಹಾರ ನೀಡಬೇಕೆಂದು ರೈತ ಸಮುದಾಯ ಆಗ್ರಹಿಸಿದೆ. ಇದೆಲ್ಲದರ ಪರಿಣಾಮ ಈ ಬಾರಿ ಬೇಳೆ ದರ ಗಗನಮುಖಿಯಾಗುವುದು ಖಚಿತವಾಗಿದ್ದು, ಗ್ರಾಹಕನಿಗೆ ಬರೆ ಗ್ಯಾರಂಟಿ.
Published by: G Hareeshkumar
First published: October 24, 2020, 7:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading