ಸ್ವಯಂ ಪ್ರೇರಣೆಯಿಂದ ಕೊರೋನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುತ್ತಿರುವ ಮುಸ್ಲಿಂ ಯುವಕರ ತಂಡ

ಜಾತಿ, ಧರ್ಮದ ವಿಷ ಬೀಜ ಬಿತ್ತಿ ಗಲಭೆ ಎಬ್ಬಿಸುತ್ತಿರುವ ಈ ಹೊತ್ತಿನಲ್ಲಿ, ಕಿಲ್ಲರ್ ಕೊರೋನಾ ಹೆಮ್ಮಾರಿಯನ್ನು ಲೆಕ್ಕಿಸದೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು, ಇಂತಹ ಮಾನವೀಯ ಕಾರ್ಯದಲ್ಲಿ ತೊಡಗಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, 108 ಸಿಬ್ಬಂದಿಗಳು ಹಾಗೂ ಈ ಮುಸ್ಲಿಂ ಯುವಕರ ತಂಡಕ್ಕೆ ನಾವು ಹ್ಯಾಟ್ಸಾಪ್ ಹೇಳಲೇಬೇಕು. 

news18-kannada
Updated:August 23, 2020, 3:09 PM IST
ಸ್ವಯಂ ಪ್ರೇರಣೆಯಿಂದ ಕೊರೋನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುತ್ತಿರುವ ಮುಸ್ಲಿಂ ಯುವಕರ ತಂಡ
ಕೊರೋನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸುತ್ತಿರುವ ಯುವಕರ ತಂಡ.
  • Share this:
ಹಾವೇರಿ; ಜಿಲ್ಲೆಯಲ್ಲಿ ಡೆಡ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಜನ-ಜೀವನ ತಲ್ಲಣಗೊಳುತ್ತಿದೆ. ಸೋಂಕಿನ ಸಂಖ್ಯೆ ಹೆಚ್ಚಳದ ಜೊತೆಗೆ ಸಾವಿನ ಸಂಖ್ಯೆಯು ಏರುತ್ತಲೇ ಸಾಗಿದೆ. ಕೊರೋನಾ ಭೀತಿಯಿಂದ ಸೋಂಕಿನಿಂದ ವ್ಯಕ್ತಿ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಅನೇಕ ಅಡ್ಡಿ ಆತಂಕಗಳು ಎದುರಾಗುತ್ತಿವೆ. ಆದರೆ ಅವೆಲ್ಲವನ್ನೂ ಮೀರಿ ಆ ಒಂದು ತಂಡ ಎಲ್ಲ ಅಡ್ಡಿ-ಆತಂಕಗಳನ್ನೂ ಮೀರಿ ಅಂತ್ಯಸಂಸ್ಕಾರ ನೆರವೇರಿಸುತ್ತಿದೆ.

ಹಾವೇರಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯ ನರ್ತನ ಜೋರಾಗಿದೆ. ಜಿಲ್ಲೆಯಲ್ಲಿ 2772 ಕೊರೋನಾ ಸೋಂಕಿನ ಪ್ರಕರಣಗಳು ಕಂಡು ಬಂದಿವೆ. ಈ ಮಧ್ಯೆ ಕೇವಲ ಎರಡು ತಿಂಗಳಲ್ಲಿ ಬರೋಬ್ಬರಿ 62 ಜನರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಸೋಂಕಿತರ ಅಂತ್ಯಕ್ರಿಯೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ 108 ಸಿಬ್ಬಂದಿಗಳು ಕೈಗೊಂಡಿದ್ದಾರೆ. ಇವರ ಜೊತೆಗೆ ರಾಣೆಬೆನ್ನೂರಿನ ಮುಸ್ಲಿಂ ಯುವಕರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಕೈ ಜೋಡಿದ್ದಾರೆ.

ಹೌದು, ಸದ್ಯದ ಪರಿಸ್ಥಿತಿಯಲ್ಲಿ ಸೋಂಕಿನಿಂದ ಮೃತಪಟ್ಟವರಿಂದಲೂ ಕೊರೋನಾ ಸೋಂಕು ಹರಡುತ್ತದೆ ಎಂಬ ತಪ್ಪು ತಿಳಿವಳಿಕೆಯಿಂದ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅಂತ್ಯಕ್ರಿಯೆಗೆ ಸಂಬಂಧಿಕರೇ ಬಂದಿಲ್ಲ. ಕೆಲ ಪ್ರಕರಣಗಳಲ್ಲಿ ಮೃತರ ಕುಟುಂಬಸ್ಥರು, ಸಂಬಂಧಿಕರು ಕ್ವಾರಂಟೈನ್ ಇರುವುದರಿಂದ ಅಥವಾ ಕೊರೋನಾ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅಂತ್ಯಕ್ರಿಯೆಗೆ ಬಂದಿಲ್ಲ. ಈ ಸಂದರ್ಭದಲ್ಲಿ ಕೊರೋನಾ ಸೇನಾನಿಗಳಾಗಿ ಇವರೆ ಮುಂದೆ ನಿಂತು ಅಂತ್ಯ ಸಂಸ್ಕಾರ ನಡೆಸಿದ್ದಾರೆ.

ಇದನ್ನು ಓದಿ: ಅರಣ್ಯ ಇಲಾಖೆ, ಕೆಇಬಿ ನಡುವೆ ಸಂವಹನ ಕೊರತೆ; ಬೀದರ್ ನಗರದಲ್ಲಿ ಬೆಳೆದು ನಿಂತ ಮರಗಳಿಗೆ ಕೊಡಲಿಯೇಟು

ಅಂತ್ಯಸಂಸ್ಕಾರಕ್ಕೆ ಸರ್ಕಾರದ ಮಾರ್ಗಸೂಚಿಯ ಪ್ರಕಾರವೇ ಆಡಳಿತ ವರ್ಗ ಸಿದ್ಧತೆ ಮಾಡಿಕೊಂಡರೂ ಅಂತ್ಯಸಂಸ್ಕಾರಕ್ಕೆ ಸ್ಮಶಾನದಲ್ಲಿ ಜಾಗ ನೀಡಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆಗಳು ಜರುಗಿವೆ. ಈ ಎಲ್ಲಾ ಅಡ್ಡಿ ಆತಂಕಗಳ ಮಧ್ಯೆಯು ಕೊರೋನಾ ಸೇನಾನಿಗಳು ಹಿಂಜರಿಯದೇ ತಮ್ಮ ಕರ್ತವ್ಯ ನಿಷ್ಠೆಯನ್ನು ಪಾಲಿಸಿ ಮಾನವೀಯತೆ ಮರೆಯುತ್ತಿದ್ದಾರೆ. ಇನ್ನೂ ರಾಣೆಬೆನ್ನೂರಿನ ಐದು ಜನ ಮುಸ್ಲಿಂ ಯುವಕರ ತಂಡ ಮೆರೆಯುತ್ತಿರುವ ಮಾನವೀಯ ಕಾರ್ಯ ಎಲ್ಲರ ಗಮನ ಸೆಳೆದಿದೆ. ಕೊರೋನಾ ವೈರಸ್​ನಿಂದ ಮೃತಪಟ್ಟವರನ್ನು ಗೌರವಯುತ ಶವಸಂಸ್ಕಾರ ನಡೆಸಲು ಸ್ವಯಂ ಪ್ರೇರಣೆಯಿಂದ ಇವರು ಮುಂದಾಗಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗಳ ಜೊತೆಯಾಗಿ ನಿಂತು ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದಾರೆ. ಈ ಪುಣ್ಯದ ಕಾರ್ಯದಲ್ಲಿ ನಾವು ಕೊರೋನಾ ಸೇನಾನಿಗಳಾಗಿ ಪಾಲ್ಗೊಂಡು ಸೇವೆ ಸಲ್ಲಿಸುತ್ತಿರುವುದು ನಮಗೆ ಹೆಮ್ಮೆ ಎನಿಸುತ್ತದೆ ಎನ್ನುತ್ತಾರೆ 108 ಸಿಬ್ಬಂದಿ.

ಒಟ್ಟಿನಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತಿ ಗಲಭೆ ಎಬ್ಬಿಸುತ್ತಿರುವ ಈ ಹೊತ್ತಿನಲ್ಲಿ, ಕಿಲ್ಲರ್ ಕೊರೋನಾ ಹೆಮ್ಮಾರಿಯನ್ನು ಲೆಕ್ಕಿಸದೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು, ಇಂತಹ ಮಾನವೀಯ ಕಾರ್ಯದಲ್ಲಿ ತೊಡಗಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, 108 ಸಿಬ್ಬಂದಿಗಳು ಹಾಗೂ ಈ ಮುಸ್ಲಿಂ ಯುವಕರ ತಂಡಕ್ಕೆ ನಾವು ಹ್ಯಾಟ್ಸಾಪ್ ಹೇಳಲೇಬೇಕು.
Published by: HR Ramesh
First published: August 23, 2020, 3:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading