ಪ್ರಧಾನಿ ಕಚೇರಿಯಿಂದ‌ ಸೂಚನೆ ಬಂದರೂ ದುರಸ್ತಿಯಾಗದ ರಸ್ತೆ ; ಮತ್ತೊಮ್ಮ ಪಿಎಂಗೆ ಮೊರೆ ಹೋಗಲು ತೀರ್ಮಾನ

ಪ್ರಧಾನ ಮಂತ್ರಿಗಳ ಕಚೇರಿಯಿಂದಲೇ ಸೂಚನೆ ಬಂದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದೇ ನಿರ್ಲಕ್ಷ್ಯ ಮುಂದುವರಿಸಿದರೆ ಮತ್ತೆ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ಅರ್ಜಿದಾರರು ತಿಳಿಸಿದ್ದಾರೆ

news18-kannada
Updated:September 27, 2020, 4:33 PM IST
ಪ್ರಧಾನಿ ಕಚೇರಿಯಿಂದ‌ ಸೂಚನೆ ಬಂದರೂ ದುರಸ್ತಿಯಾಗದ ರಸ್ತೆ ; ಮತ್ತೊಮ್ಮ ಪಿಎಂಗೆ ಮೊರೆ ಹೋಗಲು ತೀರ್ಮಾನ
ದುರಸ್ತಿಯಾಗದ ರಸ್ತೆ
  • Share this:
ರಾಯಚೂರು(ಸೆಪ್ಟೆಂಬರ್​.27): ರಾಯಚೂರು ತಾಲೂಕಿನಲ್ಲೊಂದು ರಸ್ತೆ ಇದೆ, ಈ ರಸ್ತೆಯಲ್ಲಿ ಸಂಚರಿಸುವುದೆಂದರೆ ಜೀವವನ್ನು ಕೈಯಲ್ಲಿಡಿದುಕೊಂಡು ಸಂಚರಿಸಬೇಕು. ಕಾರಣ ಈ ರಸ್ತೆಯಲ್ಲಿ ಗುಂಡಿಗಳೆ ಹೆಚ್ಚಾಗಿವೆ. ಇದು ರಾಯಚೂರು ನಗರದಿಂದ ಕೇವಲ 4 ಕಿಲೋ ಮೀಟರ್​ ದೂರದಲ್ಲಿರುವ ಕುಕನೂರು ಗ್ರಾಮದ ಗ್ರಾಮಸ್ಥರ ಭವಣೆ. ಈ ಹಿಂದೆ ಪಿಎಂಸಿಎಸ್​ವೈ ಯೋಜನೆಯಲ್ಲಿ ರಸ್ತೆ ನಿರ್ಮಿಸಿದ ನಂತರ ಇತ್ತ ಯಾರು ನೋಡಿಲ್ಲ. ಇದರಿಂದಾಗಿ 3 ಕಿಲೋ ಮೀಟರ್​ ದೂರದ ಕುಕನೂರು ಗ್ರಾಮಕ್ಕೆ ಹೋಗಲು ಗ್ರಾಮಸ್ಥರು ಹರಸಾಹಸ ಪಡಬೇಕು. ಮಳೆಗಾಲದಲ್ಲಿ ಹೊಂಡವಾಗುವ ಈ ರಸ್ತೆಯಲ್ಲಿ ಬೇರೆ ಸಂದರ್ಭದಲ್ಲಿಯೂ ತಿರುಗಾಡಲು ಆಗುವುದಿಲ್ಲ, ಸಂಪೂರ್ಣವಾಗಿ ಗುಂಡಿಗಳಿಂದ ತುಂಬಿದೆ. ಈ ರಸ್ತೆಯನ್ನು ಅಭಿವೃದ್ದಿ ಪಡಿಸಿ ಎಂದು ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಇಲ್ಲಿಯ ರಸ್ತೆ ಇಲ್ಲದಿದ್ದಕ್ಕೆ ಆಗಾಗ ಬಸ್ ಸಂಚಾರ ಸಹ ಬಂದ್ ಮಾಡಲಾಗುತ್ತದೆ. ಈಗ ಮಳೆಯಾಗಿ ಮತ್ತಷ್ಟು ಹದೆಗಟ್ಟಿದ್ದರಿಂದ ಈಗ ಬಸ್ ಸೇವೆಯೂ ಇಲ್ಲ, ಖಾಸಗಿ ವಾಹನಗಳಲ್ಲಿ ಹೋಗಬೇಕಾಗದ ಪರಿಸ್ಥಿರಿ ಇದೆ.

ಈಗ ಶಾಲಾ ಕಾಲೇಜುಗಳಿಲ್ಲ. ಆದರೆ, ಶಾಲಾ ಕಾಲೇಜುಗಳಿದ್ದಾಗ ಇಲ್ಲಿಗೆ ಬಸ್ ಸರಿಯಾದ ಸಮಯಕ್ಕೆ ಬರುತ್ತಿರಲಿಲ್ಲ. ರಸ್ತೆ ಸರಿ ಇಲ್ಲದ್ದಕ್ಕೆ ಬಸ್ ಬಂದ್ ಮಾಡುವದರಿಂದ ವಿದ್ಯಾರ್ಥಿಗಳು ಪರದಾಡುವಂತಾಗುತ್ತಿತ್ತು.

ಈ ಮಧ್ಯೆ ಕಳೆದ ವರ್ಷ ಇಲ್ಲಿಯ ಬಿಜೆಪಿ ಮುಖಂಡರಾದ ರಾಜಶೇಖರ ಎಂಬುವವರು ಜನಸ್ಪಂದನ ತಂತ್ರಾಂಶದಲ್ಲಿ ಪ್ರಧಾನ ಮಂತ್ರಿಗಳಿಗೆ ರಸ್ತೆ ಸುಧಾರಣೆಗಾಗಿ ಪತ್ರ ಬರೆದಿದ್ದರು. ಈ ಪತ್ರದಿಂದಾಗಿ ರಾಯಚೂರು ಜಿಲ್ಲಾ ಪಂಚಾಯತ್​ಗೆ ಪ್ರಧಾನ ಮಂತ್ರಿಗಳ ಕಚೇರಿಯಿಂದ ಸೂಚನೆ ಬಂದಿದ್ದು, ಈ ರಸ್ತೆ ಅಭಿವೃದ್ದಿ ಪಡಿಸಲು ಸೂಚಿಸಿದೆ. ಕಳೆದ ನವಂಬರ್ 15 ರಂದು ಈ ಪತ್ರ ಬಂದಿದ್ದು, 11 ತಿಂಗಳಾದರೂ ರಸ್ತೆ ಅಭಿವೃದ್ದಿಯಾಗಿಲ್ಲ.

ಪ್ರಧಾನ ಮಂತ್ರಿಗಳ ಕಚೇರಿಯಿಂದಲೇ ಸೂಚನೆ ಬಂದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದೇ ನಿರ್ಲಕ್ಷ್ಯ ಮುಂದುವರಿಸಿದರೆ ಮತ್ತೆ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ಅರ್ಜಿದಾರರು ತಿಳಿಸಿದ್ದಾರೆ.

ಈ ಬಗ್ಗೆ ರಾಯಚೂರು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳನ್ನು ಕೇಳಿದರೆ, 3 ಕಿ ಮೀ ರಸ್ತೆ ಅಭಿವೃದ್ದಿ ಪಡಿಸಲು ಒಂದು ಕೋಟಿ ರೂಪಾಯಿ ಯೋಜನೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಸರಕಾರದಿಂದ ಅನುದಾನ ಬಿಡುಗಡೆಯಾದ ತಕ್ಷಣ ಆರಂಭಿಸಲಾಗುವುದು. ಜನವರಿಯೊಳಗೆ ಕಾಮಗಾರಿ ಆರಂಭವಾಗಬೇಕಿತ್ತು, ಆದರೆ ಕೋವಿಡ್ ಕಾರಣದಿಂದ ಸ್ವಲ್ಪ ವಿಳಂಭವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಸೋಲು - ಸರ್ಕಾರದ ಮೇಲೆ ವಿಶ್ವಾಸ ಮತ್ತಷ್ಟು ಹೆಚ್ಚಳ ; ಸಚಿವ ಸುರೇಶ್ ಕುಮಾರ್

ಈ ಮಧ್ಯೆ ಜಿಲ್ಲಾಡಳಿತವು ಒಂದು ಕೋಟಿ ರೂಪಾಯಿಯಲ್ಲಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದೆ, ಈ ಪ್ರಸ್ತಾವನೆಯನ್ನು ಸರಕಾರ ಒಪ್ಪಿಕೊಂಡು ಅನುದಾನ ಬಿಡುಗಡೆ ಮಾಡಬಹುದಾಗಿತ್ತು. ಆದರೆ, ಯಾಕೊ ಈ ಅನುದಾನ ಬಿಡುಗಡೆ ಮಾಡಲು ಹಿ‌ಂದೇಟು ಹಾಕುತ್ತಿದೆ, ಈಗ ಕೋವಿಡ್ ಸಂಕಷ್ಟ ಸಮಯದಲ್ಲಿ ಸರಕಾರ ಆರ್ಥಿಕ ಕೊರತೆ ನೆಪ ಹೇಳಿ ಮುಂಡೂಡುತ್ತಿದೆ ಎನ್ನಲಾಗಿದೆ.

ಈ ಮಧ್ಯೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಕೆಆರ್ ಡಿಬಿಯಿಂದ ಈ ಭಾಗದ ಅಭಿವೃದ್ಧಿ ಗಾಗಿ ಸರಕಾರ ಈ ವರ್ಷ 1500 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಿಸಿದೆ. ಶಾಸಕರಾಗಲಿ ಅಥವಾ ಕೆಕೆಆರ್​ಡಿಬಿ ಅಧ್ಯಕ್ಷರಾಗಲಿ ಮನಸ್ಸು ಮಾಡಿದರೆ ಒಂದು ಕೋಟಿ ರೂ ಅನುದಾನ ನೀಡುವುದೇನು ಹೊರೆಯಾಗಲ್ಲ, ಈ ಬಗ್ಗೆ ರಾಜಶೇಖರರವರು ಅವರು ಕೆಕೆಆರ್​ಡಿಬಿ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ ರೇವೂರನ್ನು ಭೇಟಿ ಮಾಡಿ ಹಣ ಬಿಡುಗಡೆ ಮಾಡಲು ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯಾರಿಂದಾದರೂ ಆಗಲಿ ನಮ್ಮ ಗ್ರಾಮದ ರಸ್ತೆ ಅಭಿವೃದ್ಧಿ ಯಾಗಲಿ ಎಂದು ಕುಕನೂರು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
Published by: G Hareeshkumar
First published: September 27, 2020, 4:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading