ಆಮೆಗತಿಯಲ್ಲಿ ಪಶು ವೈದ್ಯಕೀಯ ಕಾಲೇಜು ಕಾಮಗಾರಿ - ಅನುದಾನದ ನಿರೀಕೆಯಲ್ಲಿ ಗೃಹ ಮಂಡಳಿ

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಕೊಯಿಲಾದ ಈ ಫಾರ್ಮ್​​ನಲ್ಲಿ ಪಶು ವೈದ್ಯಕೀಯ ಕಾಲೇಜು ಆರಂಭಕ್ಕೆ ಬಜೆಟ್​ನಲ್ಲಿ ಹಣ ಮೀಸಲಿಟ್ಟಿದ್ದರು. ಈ ಸಂಬಂಧ ಕೊಯಿಲಾ ಜಾನುವಾರು ಸಂವರ್ಧನಾ ಕೇಂದ್ರದ ಅಧೀನದಲ್ಲಿರುವ 247 ಎಕರೆ ಜಾಗವನ್ನು ಪಶು ವೈದ್ಯಕೀಯ ಕಾಲೇಜಿಗಾಗಿ ಮೀಸಲಿಡಲಾಗಿತ್ತು.

news18-kannada
Updated:September 1, 2020, 2:32 PM IST
ಆಮೆಗತಿಯಲ್ಲಿ ಪಶು ವೈದ್ಯಕೀಯ ಕಾಲೇಜು ಕಾಮಗಾರಿ - ಅನುದಾನದ ನಿರೀಕೆಯಲ್ಲಿ ಗೃಹ ಮಂಡಳಿ
ಪಶು ವೈದ್ಯಕೀಯ ಕಾಲೇಜು ಕಾಮಗಾರಿ
  • Share this:
ದಕ್ಷಿಣ ಕನ್ನಡ(ಸೆ.01): ಕರ್ನಾಟಕ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಯಿಲಾದಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ರಾಜ್ಯದ ಐದನೇ ಪಶು ವೈದ್ಯಕೀಯ ಕಾಲೇಜಿನ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ಸರ್ಕಾರದ ತೀರ್ಮಾನದ ಪ್ರಕಾರ 2020-21 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೊದಲ ಬ್ಯಾಚ್ ಆರಂಭಗೊಳ್ಳಬೇಕಿತ್ತು. ಆದರೆ, ಮೊದಲ ಹಂತಹ ಕಟ್ಟಡದ ಕಾಮಗಾರಿಯು ಕೇವಲ 75 ಶೇಕಡಾ ಮಾತ್ರ ಪೂರ್ಣಗೊಂಡಿದೆ. ಹಾಗಾಗಿ ಇನ್ನಿತರ ಕಾಮಗಾರಿಗಳು ಇನ್ನಷ್ಟೇ ಆರಂಭಗೊಳ್ಳಬೇಕಿದೆ.

2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪಶು ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಸುಮಾರು 300 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಕ್ಯಾಂಪಸ್ ನಿರ್ಮಾಣಗೊಳ್ಳಲಿದ್ದು, 2020ರ ವೇಳೆಗೆ ಮೊದಲ ಬ್ಯಾಚ್ ಆರಂಭಗೊಳಿಸುವ ಭರವಸೆಯನ್ನೂ ನೀಡಿದ್ದರು. ಆದರೆ, ಕಾಲೇಜಿನ ಮೊದಲ ಹಂತದ ಕಾಮಗಾರಿಯೇ ಆಮೆಗತಿಯಿಂದ ಸಾಗುತ್ತಿದೆ. ಮೊದಲ ಹಂತದ ಕಾಮಗಾರಿಯನ್ನು ಕರ್ನಾಟಕ ರಾಜ್ಯ ಗೃಹ ಮಂಡಳಿಗೆ ವಹಿಸಲಾಗಿದ್ದು, 103 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಲೇಜು ಕಟ್ಟಡ, ಪುರುಷ ಮತ್ತು ಮಹಿಳೆಯರ ವಸತಿಗೃಹ, ಆಡಳಿತ ಕಛೇರಿ ಸೇರಿದಂತೆ ಐದು ಕಟ್ಟಡಗಳ ನಿರ್ಮಾಣಗೊಳ್ಳಬೇಕಿತ್ತು.

ಈ ಮಧ್ಯೆ ಕೊರೋನಾ ಕಾಣಿಸಿಕೊಂಡಿದ್ದರಿಂದ ಕಾರ್ಮಿಕರು ಕೆಲಸ ಮಾಡಲು ಹಿಂದೇಟು ಹಾಕುತ್ತಿರುವುದು, ಸರ್ಕಾರದ ಅನುದಾನ ಬಿಡುಗಡೆಯಲ್ಲಿ ವ್ಯತ್ಯಯ ಮೊದಲಾದ ಕಾರಣಗಳಿಂದ ಕಾಮಗಾರಿಯೂ ಆಮೆಗತಿಯಲ್ಲಿ ಸಾಗಲು ಕಾರಣವಾಗಿದೆ. ಮೊದಲ ಹಂತದ ಕಾಮಗಾರಿಯ ಬಳಿಕ ಎರಡನೇ ಹಂತದ ಕಾಮಗಾರಿಗಳು ನಡೆಯಬೇಕಿದೆ. ಇದರಲ್ಲಿ ಒಳಚರಂಡಿ, ರಸ್ತೆ, ಸಿಬ್ಬಂದಿಗಳ ಕೊಠಡಿ, ಅಧಿಕಾರಿಗಳ ಬಂಗಲೆ, ಸಭಾಂಗಣ ಮೊದಲಾದ ಕಾಮಗಾರಿ ಇದರಲ್ಲಿ ಸೇರಿಕೊಂಡಿವೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಕೊಯಿಲಾದ ಈ ಫಾರ್ಮ್​​ನಲ್ಲಿ ಪಶು ವೈದ್ಯಕೀಯ ಕಾಲೇಜು ಆರಂಭಕ್ಕೆ ಬಜೆಟ್​ನಲ್ಲಿ ಹಣ ಮೀಸಲಿಟ್ಟಿದ್ದರು. ಈ ಸಂಬಂಧ ಕೊಯಿಲಾ ಜಾನುವಾರು ಸಂವರ್ಧನಾ ಕೇಂದ್ರದ ಅಧೀನದಲ್ಲಿರುವ 247 ಎಕರೆ ಜಾಗವನ್ನು ಪಶು ವೈದ್ಯಕೀಯ ಕಾಲೇಜಿಗಾಗಿ ಮೀಸಲಿಡಲಾಗಿತ್ತು. ಆ ಬಳಿಕ ರಾಜ್ಯದಲ್ಲಿ ಸರ್ಕಾರ ಬದಲಾಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಕಾಲೇಜಿನ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು.

ಆರಂಭದಲ್ಲಿ ಅತ್ಯಂತ ವೇಗವಾಗಿ ಸಾಗಿದ ಕಾಮಗಾರಿ ಬಳಿಕದ ದಿನಗಳಲ್ಲಿ ನಿಧಾನಗತಿಗೆ ಸಾಗಿತ್ತು. ಮೊದಲ ಹಂತದ ಕಾಮಗಾರಿಗೆ 103 ಕೋಟಿ ರೂಪಾಯಿ ವಿನಿಯೋಗಿಸಲಾಗುತ್ತಿದ್ದು, ಕರ್ನಾಟಕ ಗೃಹ ಮಂಡಳಿಗೆ ಇದೀಗ 65 ಕೋಟಿ ರೂಗಳನ್ನು ನೀಡಲಾಗಿದೆ. ಉಳಿದ 38 ಕೋಟಿ ರೂಪಾಯಿಗಳನ್ನು ಪಶು ಸಂಗೋಪನಾ ಇಲಾಖೆ ನೀಡಬೇಕಿದೆ. ಕಾಲೇಜು ಆರಂಭಕ್ಕಾಗಿ ಈಗಾಗಲೇ ಹಣ ಮಂಜೂರಾಗಿದ್ದರೂ, ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗೃಹ ಮಂಡಳಿಗೆ ಹಣ ನೀಡದಿರುವುದೂ  ಕಾಮಗಾರಿ ನಿಧಾನಗತಿಯಲ್ಲಿ ಸಾಗಲು ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮಕ್ಕಳ ಆನ್​ಲೈನ್ ಶಿಕ್ಷಣಕ್ಕೆ ನೆಟ್​ವರ್ಕ್ ಸಿಗುತ್ತಿಲ್ಲವೆಂದು ಊರು ತೊರೆಯುತ್ತಿರುವ ಮಲೆನಾಡಿನ ಜನರುಹಿಂದುಳಿದ ಪ್ರದೇಶದಲ್ಲಿ ಈ ಕಾಲೇಜು ಪ್ರಾರಂಭವಾಗುತ್ತದೆ ಎನ್ನುವ ಕಾರಣಕ್ಕಾಗಿ ಸ್ಥಳೀಯರು ಇದಕ್ಕೆ ಹೆಚ್ಚಿನ ಸಹಕಾರವನ್ನೂ ನೀಡಿದ್ದರು. ಕೃಷಿಕರ ಮಕ್ಕಳಿಗೆ ಇದರಿಂದ ಪ್ರಯೋಜನವೂ ಆಗಲಿದೆ ಎನ್ನುವ ಆಶಾಭಾವನೆಯೂ ಇತ್ತು. ಆದರೆ ಕಾಮಗಾರಿಯು ಈ ರೀತಿ ಕುಂಟುತ್ತಾ ಸಾಗುತ್ತಿರುವುದು ಬೇಸರ ತಂದಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸಿ ಕಾಲೇಜು ಪ್ರಾರಂಭಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಕೊಯಿಲಾ ಗ್ರಾಮ ಪಂಚಾಯತ್​​ನ ಮಾಜಿ ಸದಸ್ಯ ಅಬ್ದುಲ್ ಸುಲೈಮಾನ್.
Published by: Ganesh Nachikethu
First published: September 1, 2020, 2:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading