ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ಆಗ್ರಹ: ನಾಳೆಯಿಂದ APMC ವರ್ತಕರ ಸಂಘದಿಂದ ಹೋರಾಟ

ಬೇಡಿಕೆ ಈಡೇರಿಕೆಗಾಗಿ ನಾಳೆಯಿಂದ ಅನಿರ್ಧಿಷ್ಟ ಅವಧಿಯವರೆಗೆ ಎಪಿಎಂಸಿಗಳನ್ನು ಬಂದ್ ಮಾಡಲು ವರ್ತಕರು ತೀರ್ಮಾನಿಸಿದ್ದಾರೆ. ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಸಭೆ ನಡೆಸಿರುವ ಏಳು ಜಿಲ್ಲೆಗಳ ವರ್ತಕರ ಸಂಘದ ಪ್ರಮುಖರು ಈ ನಿರ್ಣಯ ಪ್ರಕಟಿಸಿದ್ದಾರೆ.

news18-kannada
Updated:July 26, 2020, 3:54 PM IST
ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ಆಗ್ರಹ: ನಾಳೆಯಿಂದ APMC ವರ್ತಕರ ಸಂಘದಿಂದ ಹೋರಾಟ
ಎಪಿಎಂಸಿ ವರ್ತಕರ ಸಂಘ
  • Share this:
ಹುಬ್ಬಳ್ಳಿ(ಜು.26): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ರಾಜ್ಯದ ಎಲ್ಲಾ ಎಪಿಎಂಸಿಗಳಲ್ಲಿ ವ್ಯಾಪಾರಸ್ಥರ ಮೇಲೆ ವಿಧಿಸುತ್ತಿರುವ ಸೆಸ್‌‌ನ್ನು ಸಂಪೂರ್ಣ ರದ್ದುಪಡಿಸಬೇಕು ಎಂದು ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆ ಮತ್ತು ಎಪಿಎಂಸಿ ವರ್ತಕರ ಸಂಘ ಒತ್ತಾಯಿಸಿದೆ.

ಬೇಡಿಕೆ ಈಡೇರಿಕೆಗಾಗಿ ನಾಳೆಯಿಂದ ಅನಿರ್ಧಿಷ್ಟ ಅವಧಿಯವರೆಗೆ ಎಪಿಎಂಸಿಗಳನ್ನು ಬಂದ್ ಮಾಡಲು ವರ್ತಕರು ತೀರ್ಮಾನಿಸಿದ್ದಾರೆ. ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಸಭೆ ನಡೆಸಿರುವ ಏಳು ಜಿಲ್ಲೆಗಳ ವರ್ತಕರ ಸಂಘದ ಪ್ರಮುಖರು ಈ ನಿರ್ಣಯ ಪ್ರಕಟಿಸಿದ್ದಾರೆ.

ಹೊಸ ಕಾಯ್ದೆಯ ಪ್ರಕಾರ ನೇರವಾಗಿ ರೈತರಿಂದ ಉತ್ಪನ್ನಗಳನ್ನು ಖರೀದಿಸಬಹುದು. ಎಪಿಎಂಸಿ ಹೊರಗಡೆ ನಡೆಯುವ ವಹಿವಾಟಿಗೆ ಯಾವುದೇ ಸೆಸ್ ವಿಧಿಸಿಲ್ಲ. ಆದರೆ ಎಪಿಎಂಸಿ ಒಳಗೆ ನಡೆಯುವ ವ್ಯಾಪಾರ ವಹಿವಾಟಿಗೆ ಶೇಕಡಾ ಒಂದರಷ್ಟು ಸೆಸ್ ವಿಧಿಸಲಾಗಿದೆ. ಇದರಿಂದ ಎಪಿಎಮ್‌ಸಿ ವರ್ತಕರಿಗೆ ಅನ್ಯಾಯವಾಗುತ್ತದೆ. ಹೆಚ್ಚುವರಿ ಸೆಸ್‌ನಿಂದಾಗಿ ಎಪಿಎಂಸಿ ಒಳಗೆ ವಹಿವಾಟು ನಡೆಸಲು ರೈತರು ಹಿಂಜರಿಯುತ್ತಾರೆ. ಒಂದು ದೇಶ ಒಂದು ತೆರಿಗೆ ಪದ್ಧತಿಗೆ ರಾಜ್ಯ ಸರ್ಕಾರ ಬದ್ಧವಾಗಿ ಇರಬೇಕು. ತಾರತಮ್ಯ ಮಾಡುವುದು ಸರಿಯಲ್ಲ ಎಂದು ವರ್ತಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ವರ್ತಕರ ಮುಷ್ಕರದಲ್ಲಿ ರಾಜ್ಯದ 162 ಎಪಿಎಂಸಿಗಳಲ್ಲಿನ ವರ್ತಕರು ಭಾಗವಹಿಸಲಿದ್ದಾರೆ. ಹುಬ್ಬಳ್ಳಿಯ ಅಮರಗೋಳದಲ್ಲಿರುವ ಜಗಜ್ಯೋತಿ ಬಸವೇಶ್ವರ ಎಪಿಎಂಸಿ ಮಾರುಕಟ್ಟೆ ಸಂಪೂರ್ಣ ಸ್ತಬ್ಧಗೊಳ್ಳಲಿದೆ. ಕೊರೋನಾ ಎಪೆಕ್ಟ್ ಹಾಗೂ ಲಾಕ್‌ಡೌನ್ ವೇಳೆ ಸ್ತಬ್ದವಾಗಿದ್ದ ಹುಬ್ಬಳ್ಳಿ ಎಪಿಎಂಸಿ ಈಗ ಮತ್ತೆ ಅನಿರ್ಧಿಷ್ಟ ಅವಧಿಯವರೆಗೆ ಬಂದ್ ಆಗಲಿದೆ.

ನಾಳೆಯಿಂದ ಎಪಿಎಂಸಿ ಬಂದ್ ಮಾಡಿ ಹೋರಾಟ ಮಾಡಲು ವರ್ತಕರ ಸಂಘದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಹೀಗಾಗಿ ಅನ್‌ಲಾಕ್ ಬಳಿಕವೂ ಸಾರ್ವಜನಿಕರು ಹಾಗೂ ರೈತರು ಮತ್ತೊಂದು ರೀತಿಯ ಸಮಸ್ಯೆ ಎದುರಿಸುವ ಪರಿಸ್ಥಿತಿ ಎದುರಾಗಲಿದೆ. ಈರುಳ್ಳಿ, ಆಲೂಗಡ್ಡೆ, ದವಸ ಧಾನ್ಯ, ಒಣ ಮೆಣಸು, ಶೇಂಗಾ, ಹತ್ತಿಕಾಳು‌, ತರಕಾರಿ ಸೇರಿದಂತೆ ವಿವಿಧ ಉತ್ಪನ್ನಗಳ ವಹಿವಾಟು ಬಂದ್ ಆಗಲಿದೆ.

ರೈತರು ನಾಳೆಯಿಂದ ಮಾರುಕಟ್ಟೆಗಳಿಗೆ ಉತ್ಪನ್ನಗಳನ್ನು ತರಬಾರದು ಎಂದು ವರ್ತಕರು ಮನವಿ ಮಾಡಿದ್ದಾರೆ. ಮುಷ್ಕರಕ್ಕೆ 1600ಕ್ಕೂ ಹೆಚ್ಚು ಎಪಿಎಂಸಿ ವರ್ತಕರು ಬೆಂಬಲ ಸೂಚಿಸಿದ್ದಾರೆ. ಎಪಿಎಂಸಿಗಳು 2019-20ನೇ ಹಣಕಾಸು ವರ್ಷದಲ್ಲಿ ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ವಹಿವಾಟು ನಡೆಸಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ 13 ಕೋಟಿ ರೂಪಾಯಿಯಷ್ಟು ಆದಾಯ ಸಂಗ್ರಹವಾಗಿದೆ. ಈಗ ಎಪಿಎಂಸಿ ಬಂದ್ ಆಗಲಿದ್ದು ತರಕಾರಿ ಮಾರಾಟ ಹಾಗೂ ಖರೀದಿಗೆ ರೈತರು ಮತ್ತು ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.
ಇದನ್ನೂ ಓದಿ: ’ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ‘ - ಬಿಜೆಪಿ ಸರ್ಕಾರದ ವಿರುದ್ಧ ನಾಳೆ ಕಾಂಗ್ರೆಸ್​ ಪ್ರತಿಭಟನೆ

ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳ ಎಪಿಎಂಸಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಸರ್ಕಾರದ ತಾರತಮ್ಯ ನೀತಿಯ ವಿರುದ್ಧ ಹೋರಾಟ ಮಾಡಲಿದ್ದಾರೆ. ಎಪಿಎಂಸಿ ಕ್ರಿಯಾ ಸಮಿತಿ ಅಧ್ಯಕ್ಷ ಶಂಕ್ರಣ್ಣ ಮುನವಳ್ಳಿ, ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ್, ಚನ್ನು ಹೊಸಮನಿ, ವಿನಯ ಜವಳಿ, ಬಸವರಾಜ ಯಕಲಾಸಪುರ, ಸಿದ್ದೇಶ್ವರ ಕಮ್ಮಾರ ಸೇರಿದಂತೆ ಹಲವು ಪ್ರಮುಖರು ಅನಿರ್ದಿಷ್ಟಾವಧಿ ಮುಷ್ಕರದ ನೇತ್ರತ್ವ ವಹಿಸಲಿದ್ದಾರೆ. ಸರ್ಕಾರ ಸೆಸ್ ಹಿಂಪಡೆಯುವವರೆಗೆ ಹೋರಾಟ ನಡೆಸುವುದಾಗಿ ಎಪಿಎಂಸಿ ವರ್ತಕರು ಘೋಷಿಸಿದ್ದಾರೆ.
Published by: Ganesh Nachikethu
First published: July 26, 2020, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading