ಸಮಾಜ‌ ಕಲ್ಯಾಣ ಇಲಾಖೆಯಲ್ಲಿ ಖರ್ಚಾಗಿದ್ದು 3.70 ಕೋಟಿ ರೂ.ಮಾತ್ರ, ವಿಪಕ್ಷ ನಾಯಕರ ಆರೋಪ ಸುಳ್ಳು; ಡಿಸಿಎಂ ಕಾರಜೋಳ

ನಿಮ್ಮ‌ ಪಕ್ಷದ ಆದ್ಯತೆ ಏನೇ ಇರಲಿ. ನೀವು ಖಾಲಿ‌ ಕೂತು ಅಧಿಕಾರಕ್ಕಾಗಿ ಹಾತೊರೆಯುತ್ತಿರಬಹುದು. ಆದರೆ ಇದನ್ನೆಲ್ಲಾ ಮಾಡಲು ಇದು ಸರಿಯಾದ ಸಮಯ ಅಲ್ಲ. ಯಾವ ಇಲಾಖೆಯಲ್ಲೂ ಅಕ್ರಮ ಆಗಿಲ್ಲ. ಎಲ್ಲಾ ಇಲಾಖೆ ಪಾರದರ್ಶಕವಾಗಿ ನಡೆದುಕೊಂಡಿವೆ ಎಂದು ಸಮರ್ಥಿಸಿಕೊಂಡರು.

news18-kannada
Updated:July 24, 2020, 6:16 PM IST
ಸಮಾಜ‌ ಕಲ್ಯಾಣ ಇಲಾಖೆಯಲ್ಲಿ ಖರ್ಚಾಗಿದ್ದು 3.70 ಕೋಟಿ ರೂ.ಮಾತ್ರ, ವಿಪಕ್ಷ ನಾಯಕರ ಆರೋಪ ಸುಳ್ಳು; ಡಿಸಿಎಂ ಕಾರಜೋಳ
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ.
  • Share this:
ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆ ಕೋವಿಡ್- 19 ಸಂಬಂಧ ಖರ್ಚು ಮಾಡಿರೋದು 3.70 ಕೋಟಿ ಮಾತ್ರ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಮಾಜ ‌ಕಲ್ಯಾಣ ಇಲಾಖೆ ವತಿಯಿಂದ 500 ಕೋಟಿ ರೂ. ಸಾಮಗ್ರಿ ಖರೀದಿ ಆರೋಪ ಮಾಡಿದ್ದಾರೆ. ಅವರ ಆರೋಪ ಸತ್ಯಕ್ಕೆ ದೂರವಾದದ್ದು. ಅವರ ಆರೋಪದಲ್ಲಿ ಹುರುಳಿಲ್ಲ. ನಾನು ಸತ್ಯದ ಮಾಹಿತಿ ಕೊಡುತ್ತೇನೆ. ಹಾಸ್ಟೆಲ್ ಮಕ್ಕಳು, ಪಿಯುಸಿ, ಎಸ್ಎಸ್ಎಲ್​ಸಿ ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್, ಸ್ಯಾನಿಟೈಸರ್ ಖರೀದಿಗಾಗಿ ಡಿಸಿಗಳಿಗೆ ಅವಕಾಶ ಕೊಟ್ಟಿದ್ದೆವು. 30 ಜಿಲ್ಲೆಗಳ ಡಿಸಿಗಳು ಖರ್ಚು ಮಾಡಿರೋದು 3.70 ಕೋಟಿ ಮಾತ್ರ. 11,421 ಚರ್ಮ ಕುಶಲ ಕರ್ಮಿಗಳಿಗೆ 5,000 ರೂ. ಸಹಾಯಧನ ರೂಪದಲ್ಲಿ 5.70 ಕೋಟಿ ರೂ. ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಟ್ಟು ಖರ್ಚು ಆಗಿರೋದು 9.40 ಕೋಟಿ ಮಾತ್ರ ಎಂದು ತಿಳಿಸಿದರು.

ವಲಸೆ ಕಾರ್ಮಿಕರು ಹಾಗೂ ನಿರಾಶ್ರಿತರ ಸಲುವಾಗಿ ಆಹಾರ ನೀಡುವುದರ ಜೊತೆಗೆ ಶುಚಿ ಕಿಟ್ ಕೊಡಲಾಗಿದೆ. ಈ ಸಂಬಂಧ 1.24 ಕೋಟಿ ರೂ. ಖರ್ಚು ಮಾಡಲಾಗಿದೆ. ಇದರಲ್ಲಿ 1.6 ಕೋಟಿ ರೂ. ಜಿಲ್ಲಾಡಳಿತ ಭರಿಸಿದೆ. ಇನ್ನು 9 ಸಾವಿರ ರೂ.ಗೆ ಸ್ಕ್ಯಾನರ್ ನಾವು ಖರೀದಿ ಮಾಡಿಲ್ಲ. ಜಿಎಸ್​ಟಿ ಸೇರಿ 4,720 ರೂ. ನಂತೆ ಥರ್ಮಲ್ ಸ್ಕ್ಯಾನ್ ಖರೀದಿ ಮಾಡಲಾಗಿದೆ. ಇನ್ನು ಕಾಂಗ್ರೆಸ್ ಆರೋಪಿಸಿದಂತೆ ಸ್ಯಾನಿಟೈಸರ್ ಅನ್ನು 500 ಎಂಎಲ್ ಬಾಟಲಿಗೆ 600 ರೂ. ಕೊಟ್ಟು ಖರೀದಿಸಿಲ್ಲ. 500 ಎಂಎಲ್ ಗೆ 250 ರೂ. ನೀಡಿ ಖರೀದಿಸಲಾಗಿದೆ. ಪ್ರತಿ ಮಾಸ್ಕ್ 17.54 ರೂಪಾಯಿ ಅಂತೆ ಖರೀದಿ ಮಾಡಿದ್ದೇವೆ. ಥರ್ಮಲ್ ಸ್ಕ್ಯಾನ್, ಸ್ಯಾನಿಟೈಸ್, ಮಾಸ್ಕ್ ಗೆ ಖರ್ಚಾಗಿರೋದು 65.28 ಲಕ್ಷ ರೂ. ಮಾತ್ರ. ಇದರಲ್ಲಿ ಥರ್ಮಲ್ ಸ್ಕ್ಯಾನಿಂಗ್ ಗೆ 42.55 ಲಕ್ಷ ಖರ್ಚಾಗಿದೆ. ಸ್ಯಾನಿಟೈಸರ್ ಗೆ 55 ಸಾವಿರ ಮಾತ್ರ ಖರ್ಚಾಗಿದೆ ಎಂದು ವಿವರಿಸಿದರು.

ಸಿದ್ದರಾಮಯ್ಯ ಆರೋಪ ಶುದ್ದ ಸುಳ್ಳು. ಸಮಾಜ ಕಲ್ಯಾಣ ಇಲಾಖೆಯಿಂದ ಸರ್ಕಾರದ ವತಿಯಿಂದ ಯಾವ ವಸ್ತು ಖರೀದಿ ಮಾಡಿಲ್ಲ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ಹಣ ಬಿಡುಗಡೆಯಾಗಿದೆ. ವಲಸೆ ಕಾರ್ಮಿಕರು ಹಾಗೂ ನಿರಾಶ್ರಿತರ ಸಲುವಾಗಿ 53.43 ಲಕ್ಷ ಖರ್ಚು ಮಾಡಲಾಗಿದೆ. ಇದರಲ್ಲಿ ಇಲಾಖೆ 43.13 ಲಕ್ಷ ಹಾಗೂ ಜಿಲ್ಲಾಡಳಿತ 10.30 ಲಕ್ಷ ಭರಿಸಿದೆ. ಇದನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಿಂದ ಬಿಡುಗಡೆ ಮಾಡಲಾಗಿದೆ. ವಲಸೆ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ 1.27 ಕೋಟಿ ರೂ. ಖರ್ಚು ಮಾಡಲಾಗಿದೆ. ಸಿದ್ದರಾಮಯ್ಯ ಆರೋಪದಲ್ಲಿ ಸತ್ಯ ಇಲ್ಲ. ಇದಕ್ಕಾಗಿ ಯಾವುದೇ ತನಿಖೆ ಅಗತ್ಯ ಇಲ್ಲ. ನಾವು ಸಂಪೂರ್ಣ ದಾಖಲೆ ಕೊಟ್ಟಿದ್ದೇವೆ. ಯಾವ ಇಲಾಖೆಯಲ್ಲಿ ಅಕ್ರಮ ಆಗಿಲ್ಲ. ಸುಳ್ಳು ಆರೋಪಕ್ಕೆ ತನಿಖೆಗೆ ಅಗತ್ಯವಿಲ್ಲ ಎಂದು ತಿಳಿಸಿದರು.

ಇದನ್ನು ಓದಿ: Dr K Sudhakar: ‘ಸಿದ್ದರಾಮಯ್ಯರ ಸಹಕಾರ, ಮಾರ್ಗದರ್ಶನವನ್ನು ಸದಾ ಸ್ಮರಿಸುತ್ತೇನೆ‘ - ಸಚಿವ ಡಾ. ಕೆ ಸುಧಾಕರ್​

ಇಂಥ ಸಂಕಷ್ಟದ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡಿ ಅಪಪ್ರಚಾರ ಮಾಡಬಾರದು ಅಂತ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಿಗೆ ಮನವಿ ಮಾಡ್ತೀನಿ. ನಿಮ್ಮ‌ ಪಕ್ಷದ ಆದ್ಯತೆ ಏನೇ ಇರಲಿ. ನೀವು ಖಾಲಿ‌ ಕೂತು ಅಧಿಕಾರಕ್ಕಾಗಿ ಹಾತೊರೆಯುತ್ತಿರಬಹುದು. ಆದರೆ ಇದನ್ನೆಲ್ಲಾ ಮಾಡಲು ಇದು ಸರಿಯಾದ ಸಮಯ ಅಲ್ಲ. ಯಾವ ಇಲಾಖೆಯಲ್ಲೂ ಅಕ್ರಮ ಆಗಿಲ್ಲ. ಎಲ್ಲಾ ಇಲಾಖೆ ಪಾರದರ್ಶಕವಾಗಿ ನಡೆದುಕೊಂಡಿವೆ ಎಂದು ಸಮರ್ಥಿಸಿಕೊಂಡರು.
Published by: HR Ramesh
First published: July 24, 2020, 6:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading