ನೀವು ಪ್ರಾಮಾಣಿಕರಾಗಿದ್ದರೆ ಕೊರೋನಾ ಅವ್ಯವಹಾರದ ಕುರಿತು ತನಿಖೆ ನಡೆಸಿ; ಸಚಿವ ಸುಧಾಕರ್‌ಗೆ ಸಿದ್ದರಾಮಯ್ಯ ಸವಾಲ್

ಪ್ರಸ್ತಾವನೆ, ಮಂಜೂರಾತಿ, ಅನುಮೋದನೆ, ವೆಚ್ಚ ಅಂದರೆ ಏನು ಎಂದು ಗೊತ್ತಿಲ್ಲದೇ ನಾನು 13 ಬಜೆಟ್ ಮಂಡಿಸಿದ್ದೇನಾ..? ನಾನು ಎಷ್ಟು ವರ್ಷ ಮಂತ್ರಿ ಆಗಿದ್ದೆ, ಉಪಮುಖ್ಯಮಂತ್ರಿ, ಸಿಎಂ ಆಗಿಯೂ ಕೆಲಸ ಮಾಡಿದ್ದೇನೆ. ಆದರೆ, ಸುಧಾಕರ್ ಎಷ್ಟು ವರ್ಷ ಸಚಿವರಾಗಿದ್ದಾರೆ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅಧಿಕಾರದ ಅಹಂನಿಂದ ಮಾತನಾಡಬಾರದು ಎಂದು ಸುಧಾಕರ್ ಅವರಿಗೆ ಕಿವಿಮಾತು ಹೇಳಿದ್ದಾರೆ.

news18-kannada
Updated:July 24, 2020, 12:16 PM IST
ನೀವು ಪ್ರಾಮಾಣಿಕರಾಗಿದ್ದರೆ ಕೊರೋನಾ ಅವ್ಯವಹಾರದ ಕುರಿತು ತನಿಖೆ ನಡೆಸಿ; ಸಚಿವ ಸುಧಾಕರ್‌ಗೆ ಸಿದ್ದರಾಮಯ್ಯ ಸವಾಲ್
ಸಿದ್ದರಾಮಯ್ಯ
  • Share this:
ಬೆಂಗಳೂರು (ಜುಲೈ 24); ಕೊರೋನಾ ಪರಿಕರಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿಲ್ಲ, ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದಾರೆ ಎಂದರೆ ಭಯವೇಕೆ? ನೀವು ಪ್ರಾಮಾಣಿಕರಾಗಿದ್ದರೆ ಸಿಟ್ಟಿಂಗ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಿ. ತಮ್ಮನ್ನು ತಾವು ಪ್ರಾಮಾಣಿಕರು ಎಂದು ನಿರೂಪಿಸಿಕೊಳ್ಳಿ ಎಂದು ವಿರೋಧ ಪಕ್ಷದ ನಾಯಕ ಸಚಿವ ಡಾ|ಕೆ. ಸುಧಾಕರ್‌ಗೆ ಸವಾಲು ಹಾಕಿದ್ದಾರೆ.

ರಾಜ್ಯದಲ್ಲಿ ಕೊರೋನಾ ತಾಂಡವವಾಡುತ್ತಿದೆ. ಸರಾಸರಿಯಾಗಿ ಒಂದು ದಿನಕ್ಕೆ 4 ಸಾವಿರಕ್ಕಿಂತ ಅಧಿಕ ಜನ ರಾಜ್ಯದಲ್ಲಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೊರೋನಾ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದೆ. ಎಲ್ಲಾ ವಸ್ತುಗಳನ್ನು ದುಪ್ಪಟ್ಟು ಬೆಲೆ ನೀಡಿ ಖರೀದಿಸಿದೆ. ಈ ಮೂಲಕ ಸಚಿವರು ಸಾವಿರಾರು ಕೋಟಿ ಹಣ ಲೂಟಿ ಹೊಡೆದಿದ್ದಾರೆ ಎಂದು ಸಿದ್ದರಾಮಯ್ಯ ಕಳೆದ ಹಲವು ದಿನಗಳಿಂದ ಆರೋಪಿಸುತ್ತಲೇ ಇದ್ದಾರೆ.

ಆದರೆ, ಇದಕ್ಕೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಸಚಿವ ಸುಧಾಕರ್, “ಕೊರೋನಾ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ. ಸಿದ್ದರಾಮಯ್ಯನವರಿಗೆ ಪ್ರಸ್ತಾವನೆ, ಮಂಜೂರಾತಿ, ಅನುಮೋದನೆ ಹಾಗೂ ವೆಚ್ಚ ಅಂದರೆ ಏನೂ ಎಂದೇ ಗೊತ್ತಿಲ್ಲ” ಎಂದು ಹೀಯಾಳಿಸಿದ್ದರು.

ಸಚಿವ ಸುಧಾಕರ್ ಅವರ ಮಾತಿಗೆ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, “ಪ್ರಸ್ತಾವನೆ, ಮಂಜೂರಾತಿ, ಅನುಮೋದನೆ, ವೆಚ್ಚ ಅಂದರೆ ಏನು ಎಂದು ಗೊತ್ತಿಲ್ಲದೇ ನಾನು 13 ಬಜೆಟ್ ಮಂಡಿಸಿದ್ದೇನಾ..? ನಾನು ಎಷ್ಟು ವರ್ಷ ಮಂತ್ರಿ ಆಗಿದ್ದೆ, ಉಪಮುಖ್ಯಮಂತ್ರಿ, ಸಿಎಂ ಆಗಿಯೂ ಕೆಲಸ ಮಾಡಿದ್ದೇನೆ. ಆದರೆ, ಸುಧಾಕರ್ ಎಷ್ಟು ವರ್ಷ ಸಚಿವರಾಗಿದ್ದಾರೆ? ಎಂದು ಪ್ರಶ್ನಿಸಿದ ಅವರು, ಅಧಿಕಾರದ ಅಹಂನಿಂದ ಮಾತನಾಡಬಾರದು” ಎಂದು ಸುಧಾಕರ್ ಅವರಿಗೆ ಕಿವಿಮಾತು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಕೊರೋನಾ ಅವ್ಯವಹಾರದ ಕುರಿತು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, "ಸರ್ಕಾರ ಎಂದರೆ ಸಚಿವರ ಜವಾಬ್ದಾರಿ. ಕೊರೋನಾ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ ಎಂಬುದಾದರೆ ನ್ಯಾಯಾಂಗ ತನಿಖೆ ನಡೆಸಲು ಭಯವೇಕೆ? ಈ ಅವ್ಯವಹಾರದ ಕುರಿತು ನ್ಯಾಯಾಂಗ ತನಿಖೆ ಆಗಬೇಕು ಎಂಬುದೇ ನಮ್ಮ ಬೇಡಿಕೆ. ಆದರೆ, ನಾವು ತನಿಖೆ ಮಾಡಲ್ಲ ಎಂದರೆ ಏನರ್ಥ? ತಾವು ತಪ್ಪು ಮಾಡಿಲ್ಲ ಎಂದರೆ ತನಿಖೆಗೆ ಹೆದರುವುದೇಕೆ?” ಎಂದು ಸುಧಾಕರ್‌ಗೆ ಪ್ರಶ್ನಿಸಿದ್ದಾರೆ.

“ಅವ್ಯವಹಾರದ ಕುರಿತು ನಾವು ಬಿಡುಗಡೆ ಮಾಡಿರುವ ದಾಖಲೆಗಳು ನಾವೇ ಸೃಷ್ಟಿಸಿದ್ದಲ್ಲ. ಅವೆಲ್ಲವೂ ಸರ್ಕಾರಿ ದಾಖಲೆಗಳು. ಕೇಂದ್ರ ಸರ್ಕಾರ ತಲಾ 4 ಲಕ್ಷಕ್ಕೆ 50,000 ವೆಂಟಿಲೇಟರ್ ಖರೀದಿಸಿ ರಾಜ್ಯಕ್ಕೆ 1,600 ವೆಂಟಿಲೇಟರ್ ಕೊಟ್ಟಿರುವುದಾಗಿ ತಿಳಿಸಿದೆ. ಹಾಗಾದರೆ ಕೇಂದ್ರ ಸರ್ಕಾರ ಖರೀದಿಸಿದ್ದು ಕಳಪೆ ವೆಂಟಿಲೇಟರ್‌ಗಳಾ? ಇವರು ಕೇಂದ್ರ ಕೊಟ್ಟಿರೋದು ಕಳಪೆ ಅಂತ ಹೇಳ್ತಾರಾ? ಅದು ಕಳಪೆ ಅಲ್ಲ ಎಂದಾರೆ ಇವರು ಖರೀದಿಸಿದ ವೆಂಟಿಲೇಟರ್‌ಗಳಿಗೆ ದುಪ್ಪಟ್ಟು ಬೆಲೆ ಏಕೆ? ಮೊದಲು ಒಂದು ಲೆಕ್ಕ ನೀಡಿದರು, ಈಗ ಇನ್ನೊಂದು ಲೆಕ್ಕ ನೀಡುತ್ತಿದ್ದಾರೆ. ಯಾಕೆ ಈ ತರ ವ್ಯತ್ಯಾಸ?

ಇದನ್ನೂ ಓದಿ : ದೇಶದ ಅತಿ ದೊಡ್ಡ BIEC ಕೋವಿಡ್ ಕೇರ್ ಸೆಂಟರ್ ಸಿದ್ಧತೆಗೆ ವಿಳಂಬವೇಕೆ?; ಇಲ್ಲಿದೆ ನ್ಯೂಸ್‌18 ರಿಯಾಲಿಟಿ ಚೆಕ್

ಇನ್ನೂ ಕಾರ್ಮಿಕ ಇಲಾಖೆಯ ಫುಡ್ ಪ್ಯಾಕೇಟ್‌ಗಳನ್ನು ಕೊಡುವಾಗಲೂ ಇವರು ಅವ್ಯವಹಾರ ಮಾಡಿದ್ದಾರೆ. ಆಹಾರ ಪ್ಯಾಕೇಟ್ ನೀಡಿದ್ದಕ್ಕೆ ಮೊದಲು 324 ಕೋಟಿ ಖರ್ಚಾಗಿದೆ ಎಂದು ಹೇಳಿದ್ದರು. ಈಗ 2018 ಕೋಟಿ ಖರ್ಚಾಗಿದೆ ಎಂದು ಹೇಳುತ್ತಿದ್ದಾರೆ. ಸರ್ಕಾರದ ಸಚಿವರಿಗೆ ನಿಖರ ಮಾಹಿತಿ ಇಲ್ಲ ಎಂದರೆ ಕಳ್ಳತನವಾಗಿದೆ ಎಂದೇ ಅರ್ಥ. ಕೊರೋನಾ ವಿಚಾರದಲ್ಲಿ ಎಲ್ಲಾ ವಿಭಾಗದಲ್ಲೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸೋತಿದೆ. ಅವ್ಯವಹಾರ ಕಣ್ಣಿಗೆ ರಾಚುತ್ತಿದೆ. ಹೀಗಾಗಿ ಈ ಅವ್ಯವಹಾರದ ಕುರಿತು ನ್ಯಾಯಾಂಗ ತನಿಖೆಯಾಗಲಿ. ಸರಿ-ತಪ್ಪುಗಳನ್ನು ಜನರೇ ನಿರ್ಧರಿಸಲಿ” ಎಂದು ಸಿದ್ದರಾಮ್ಯಯ ಅಭಿಪ್ರಾಯಪಟ್ಟಿದ್ದಾರೆ.
Published by: MAshok Kumar
First published: July 24, 2020, 12:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading