ಮುಂಬೈ (ಏಪ್ರಿಲ್ 21); ದೇಶದಲ್ಲಿ ಕೊರೋನಾ ಅಲೆ ಮಿತಿಮೀರಿದೆ. ದಿನಕ್ಕೆ 2.5 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗುತ್ತಿದೆ. ಆಕ್ಸಿಜನ್ ಕೊರತೆಯಿಂದಾಗಿ ಅಪಾರ ಜನ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಮುಂಬೈನಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಪರಿಣಾಮ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈಗಾಗಲೇ ಏಪ್ರಿಲ್ 15 ರಿಂದ ಲಾಕ್‌ಡೌನ್ ರೀತಿಯ ನಿರ್ಬಂಧಗಳನ್ನು ಜಾರಿ ಮಾಡಿದ್ದಾರೆ. ಆದರೂ ಕೊರೋನಾ ಹತೋಟಿಗೆ ಬಂದಿಲ್ಲ. ಪರಿಣಾಮ ಮಹಾರಾಷ್ಟ್ರದಲ್ಲಿ 15 ದಿನಗಳ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಲು ಸರ್ಕಾರವು ಮುಂದಾಗಿದೆ. ಮಂಗಳವಾರ ನಡೆದ ಕ್ಯಾಬಿನೆಟ್ ಸಭೆಯು ಬುಧವಾರ ರಾತ್ರಿಯಿಂದ ಕಟ್ಟುನಿಟ್ಟಾದ ಲಾಕ್‌ಡೌನ್ ವಿಧಿಸಲು ಸರ್ವಾನುಮತದಿಂದ ನಿರ್ಧರಿಸಿದೆ ಎನ್ನಲಾಗಿದೆ.
ಅಂತಿಮ ಘೋಷಣೆಯನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬುಧವಾರ ಮಾಡಲಿದ್ದಾರೆ ಎಂದು ಆರೋಗ್ಯ ಸಚಿವ ರಾಜೇಶ್ ಟೊಪೆ ತಿಳಿಸಿದ್ದಾರೆ. ಈ ಸಭೆಯ ವೇಳೆ ರಾಜ್ಯ ಮಂಡಳಿಯ 10 ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲು ಸಹ ಸಚಿವ ಸಂಪುಟ ನಿರ್ಧರಿಸಿದೆ.
ರಾಜ್ಯವು ವೈದ್ಯಕೀಯ ಆಮ್ಲಜನಕ ಮತ್ತು ರೆಮ್‌ಡೆಸಿವಿರ್ ಚುಚ್ಚುಮದ್ದಿನ ತೀವ್ರ ಕೊರತೆಯನ್ನು ಎದುರಿಸುತ್ತಿದೆ, ಎಲ್ಲಾ ಆಸ್ಪತ್ರೆಗಳ ಹಾಸಿಗೆಗಳು ತುಂಬಿಹೋಗಿವೆ. ನಾವು ಈಗ ಕಾರ್ಯನಿರ್ವಹಿಸದಿದ್ದರೆ, ಕೊರೊನಾ ನಿರ್ವಹಿಸಲು ಕಷ್ಟವಾಗುತ್ತದೆ ಎಂದು ರಾಜೇಶ್ ಟೋಪೆ ಹೇಳಿದ್ದಾರೆ.
ರಾಜ್ಯದಲ್ಲಿ ಮಂಗಳವಾರ 62,097 ಹೊಸ ಕೊರೊನಾ ವೈರಸ್ ಪ್ರಕರಣಗಲು ವರದಿಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ 39,60,359 ಜನರಿಗೆ ಸೋಂಕಿಗೆ ಒಳಗಾಗಿದ್ದಾರೆ. ಕಳೆದ ಒಂದು ದಿನದಲ್ಲಿ 519 ರೋಗಿಗಳು ಸೋಂಕಿಗೆ ಬಲಿಯಾಗಿದ್ದಾರೆ, ಇದುವರೆಗೂ ರಾಜ್ಯದಲ್ಲಿ ಒಟ್ಟು 61,343 ಜನರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೊತೆಗೆ, ಕಳೆದ ಒಂದು ದಿನಗಳಲ್ಲಿ 54,224 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಸೋಂಕಿನಿಂದ ಒಟ್ಟು 32,13,464 ಜನರು ಚೇತರಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದ ಸಕ್ರಿಯ ಕೊರೊನ ಸೋಂಕಿನ ಪ್ರಕರಣಗಳು 6,83,856 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಮಹಾರಾಷ್ಟ್ರದ ಮಾಸಿಕ್ನಲ್ಲಿ ಡಾ ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕರ್ ಸೋರಿಕೆಯಾದ ಘಟನೆ ಬುಧವಾರ ನಡೆದಿದ್ದು, ಘಟನೆಯಲ್ಲಿ 22 ಮಂದಿ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದು ಸೋರಿಕೆ ನಿಯಂತ್ರಣ ಕಾರ್ಯಾಚರಣೆ ಮುಂದುವರೆದಿದೆ.
ಮಹಾರಾಷ್ಟ್ರದ ನಾಸಿಕ್ ಡಾ ಜಾಕೀರ್ ಹುಸೇನ್ ಆಸ್ಪತ್ರೆಯ ಆಕ್ಸಿಜನ್ ಸೋರಿಕೆ ಪ್ರಕರಣವನ್ನು ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ. ಆಸ್ಪತ್ರೆಯಲ್ಲಿ 171 ಕೋವಿಡ್-19 ರೋಗಿಗಳಿದ್ದರು. ಅವರಲ್ಲಿ 67 ಮಂದಿ ಆಮ್ಲಜನಕದ ಬಲದಲ್ಲಿ ಇದ್ದರು.ದೇಶದಲ್ಲಿ ಮಾರಕ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಮಹಾರಾಷ್ಟ್ರದಲ್ಲಿ ಅತಿ ವೇಗವಾಗಿ ಸೋಂಕು ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಜಾರಿಗೆ ತರುತ್ತಿದೆ. ಇದೀಗ ಮತ್ತೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಏ.20ರಿಂದ ಅಗತ್ಯ ವಸ್ತುಗಳ ಮಾರಾಟ ಅಂಗಡಿಗಳು ಬೆಳಗ್ಗೆ 7ರಿಂದ 11 ಗಂಟೆಯವರೆಗೆ ಮಾತ್ರ ತೆರೆಯಲು ಅವಕಾಶ ನೀಡಿದೆ.
ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿ ಇಟ್ಟುಕೊಂಡು ಮಹಾರಾಷ್ಟ್ರ ಸರ್ಕಾರ ಕೋವಿಡ್ ಮಾನದಂಡಗಳನ್ನು ಹೆಚ್ಚಿಸಿದೆ. ಏಪ್ರಿಲ್ 20 ರಿಂದ ದಿನಸಿ ಮತ್ತು ಇತರ ಅಂಗಡಿಗಳು ಬೆಳಗ್ಗೆ 7 ರಿಂದ 11 ರವರೆಗೆ ತೆರೆದಿರಲು ಅವಕಾಶವಿರುತ್ತದೆ. ಜೊತೆಗೆ ವಾರಂತ್ಯದ ದಿನಗಳಲ್ಲಿ ಲಾಕ್‌ಡೌನ್ ಮುಂದುವರೆಯಲಿದೆ.
ಇದನ್ನೂ ಓದಿ: Coronavirus | ಮಹಾರಾಷ್ಟ್ರದಲ್ಲಿ ಬೆಳಗ್ಗೆ 7ರಿಂದ 11ಗಂಟೆಯವರೆಗೆ ಮಾತ್ರ ದಿನಸಿ ಅಂಗಡಿ ತೆರೆಯಲು ಅವಕಾಶ
ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ.
ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸೋಂಕು ಪೀಡಿತರಾಗಿದ್ದರು. ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಕೊರೋನಾ ಸೋಂಕು ಪೀಡಿತರು ಪತ್ತೆಯಾಗುತ್ತಿದ್ದರು. ಈಗ ದಿನ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಗೋಚರಿಸಲು ಆರಂಭಿಸಿವೆ.