news18-kannada Updated:April 25, 2021, 3:35 PM IST
ರಾಹುಲ್ ಗಾಂಧಿ.
ನವ ದೆಹಲಿ (ಏಪ್ರಿಲ್ 25); ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ. ಪ್ರತಿ ದಿನ ಮೂರು ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ. ಈ ನಡುವೆ ಮುಂದಿನ ತಿಂಗಳು ಕೊರೋನಾ ಇನ್ನಷ್ಟು ಹೆಚ್ಛಳ ಆಗಲಿದೆ, ಭಾರೀ ದುರ್ಘಟನೆ ಸಂಭವಿಸಲಿದೆ ಎಂಬ ಕರಾಳ ಭವಿಷ್ಯವೊಂದು ಕೇಳಿಬಂದಿದೆ. ಅಲ್ಲದೆ, ದೇಶದಲ್ಲಿ ತೀವ್ರ ಆಮ್ಲಜನಕದ ಬಿಕ್ಕಟ್ಟು ತಲೆದೋರಿದೆ. ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ವ್ಯವಸ್ಥೆಯು ವಿಫಲವಾಗಿರುವ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ರಾಜಕೀಯ ಕೆಲಸ ಬಿಟ್ಟು ಸಾರ್ವಜನಿಕರಿಗೆ ಸಹಾಯ ಮಾಡುಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ತಮ್ಮ ಟ್ವಿಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾಹುಲ್ ಗಾಂಧಿ, "ವ್ಯವಸ್ಥೆ ವಿಫಲವಾಗಿದೆ. ಜನ್ ಕಿ ಬಾತ್ ಮಾಡುವುದು ಮುಖ್ಯವಾಗಿದೆ. ಈ ಬಿಕ್ಕಟ್ಟಿನಲ್ಲಿ, ದೇಶಕ್ಕೆ ಜವಾಬ್ದಾರಿಯುತ ನಾಗರಿಕರು ಬೇಕಾಗಿದ್ದಾರೆ. ಎಲ್ಲಾ ರಾಜಕೀಯ ಕೆಲಸಗಳನ್ನು ತೊರೆದು, ಸಾರ್ವಜನಿಕರಿಗೆ ಎಲ್ಲಾ ಸಹಾಯವನ್ನು ನೀಡಿ, ನಮ್ಮ ದೇಶದ ಜನರ ನೋವನ್ನು ಕಡಿಮೆ ಮಾಡಿ ಎಂದು ನನ್ನ ಕಾಂಗ್ರೆಸ್ ಸಹೋದ್ಯೋಗಿಗಳಿಗೆ ವಿನಂತಿ ಮಾಡುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ,“ಇದು ಕಾಂಗ್ರೆಸ್ ಕುಟುಂಬದ ಧರ್ಮ” ತಮ್ಮ ಟ್ವೀಟ್‌ನಲ್ಲಿ ಸೇರಿಸಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ಇನ್ನೂ ಮೂರು ಹಂತಗಳ ಚುನಾವಣೆ ಇರುವಾಗಲೇ ಕೊರೋನಾ ಕಾರಣದಿಂದ ಏಪ್ರಿಲ್ 18 ರಂದು, ರಾಹುಲ್ ಗಾಂಧಿ ಅವರು ಪಶ್ಚಿಮ ಬಂಗಾಳದಲ್ಲಿ ನಡೆಯಲಿದ್ದ ಎಲ್ಲಾ ಸಾರ್ವಜನಿಕ ರ್‍ಯಾಲಿಗಳನ್ನು ರದ್ದುಗೊಳಿಸಿದ್ದರು.
"ಕೊರೊನಾ ಪರಿಸ್ಥಿತಿಯ ದೃಷ್ಟಿಯಿಂದ, ನಾನು ಪಶ್ಚಿಮ ಬಂಗಾಳದಲ್ಲಿ ನನ್ನ ಎಲ್ಲಾ ಸಾರ್ವಜನಿಕ ರ್‍ಯಾಲಿಗಳನ್ನು ಸ್ಥಗಿತಗೊಳಿಸುತ್ತಿದ್ದೇನೆ. ಪ್ರಸ್ತುತ ಸಂದರ್ಭಗಳಲ್ಲಿ ದೊಡ್ಡ ಸಾರ್ವಜನಿಕ ರ್‍ಯಾಲಿಗಳನ್ನು ನಡೆಸುವ ಪರಿಣಾಮಗಳ ಬಗ್ಗೆ ಆಳವಾಗಿ ಯೋಚಿಸುವಂತೆ ನಾನು ಎಲ್ಲಾ ರಾಜಕೀಯ ಮುಖಂಡರಿಗೆ ಸಲಹೆ ನೀಡುತ್ತೇನೆ" ಎಂದು ಟ್ವೀಟ್ ಮಾಡಿದ್ದರು.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,767 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಅಲ್ಲದೆ, ದಾಖಲೆಯ 3,49,691 ಹೊಸ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿವೆ.
ದೇಶದಲ್ಲಿ ಕೊರೋನಾತಂಕ:
ಭಾರತದಲ್ಲಿ ತೀವ್ರವಾಗಿ ಹೆಚ್ಚಳ ಆಗುತ್ತಿರುವ ಕೊರೊನಾ ಬಗ್ಗೆ ಅಧ್ಯಯನ ನಡೆಸಿರುವ ವಾಷಿಂಗ್ಟನ್ ನ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವ್ಯಾಲ್ಯುಎಷನ್ (IHME) ಸಂಸ್ಥೆ ಇದೇ ಏಪ್ರಿಲ್ 15ರಂದು ಪೇಪರ್ ಪ್ರೆಸೆಂಟ್ ಮಾಡಿದ್ದ ಅದರಲ್ಲಿ ಮುಂದಿನ ತಿಂಗಳು ಕೊರೋನಾ ಇನ್ನಷ್ಟು ಹೆಚ್ಛಳ ಆಗಲಿದೆ, ಭಾರೀ ದುರ್ಘಟನೆ ಸಂಭವಿಸಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ವಾಷಿಂಗ್ಟನ್ ನ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವ್ಯಾಲ್ಯುಎಷನ್ ಅಧ್ಯಯನ ವರದಿ ಪ್ರಕಾರ ಮೇ ತಿಂಗಳ ಮಧ್ಯ ಭಾಗದಲ್ಲಿ ಭಾರತದಲ್ಲಿ ಕೊರೊನಾದಿಂದ ಸಾಯುವವರ ಸಂಖ್ಯೆ 5,600 ದಾಟಲಿದೆ. ಏಪ್ರಿಲ್ 12ರಿಂದ ಆಗಸ್ಟ್ 1ರ ನಡುವೆ 3,29,000 ಸಾವುಗಳು ಆಗಬಹುದು. ಇದರಿಂದ ಕೊರೊನಾಗೆ ಬಲಿಯಾದವರ ಒಟ್ಟು ಸಂಖ್ಯೆ 6,65,000ಕ್ಕೆ ಏರಿಕೆಯಾಗಬಹುದು ಎಂದು ಹೇಳಿದೆ.
ಇದನ್ನೂ ಓದಿ: ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ಮೋದಿ ಸಭೆ, ಟಿವಿಯಲ್ಲಿ ನೇರ ಪ್ರಸಾರ: ವಿಷಾಧಿಸಿದ ಅರವಿಂದ ಕೇಜ್ರಿವಾಲ್
ಹೊಸ ಅಧ್ಯಯನದಲ್ಲಿ ಸಂಶೋಧಕರು ಅಂದಾಜು ಮಾಡಿರುವ ಪ್ರಕಾರ 2022 ಏಪ್ರಿಲ್ 12 ರ ಹೊತ್ತಿಗೆ ಭಾರತದಲ್ಲಿ ಶೇಕಡಾ 24ರಷ್ಟು ಜನರಿಗೆ ಕೋವಿಡ್-19 ಸೋಂಕು ತಗುಲಿರುತ್ತದೆ. ಮೇ ತಿಂಗಳ ಎರಡನೇ ವಾರದಲ್ಲಿ 8 ಲಕ್ಷ ಹೊಸ ದೈನಂದಿನ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.
ಹಿಂದೆ ವಾಷಿಂಗ್ಟನ್ ನ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವ್ಯಾಲ್ಯುಎಷನ್ ಸಂಸ್ಥೆಯು 'ಭಾರತದ ದೈನಂದಿನ ಕೋವಿಡ್ -19 ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯು 2020ರ ಸೆಪ್ಟೆಂಬರ್ ನಿಂದ 2021ರ ಫೆಬ್ರವರಿ ಮಧ್ಯದವರೆಗೆ ಕುಸಿಯಲಿವೆ' ಎಂದು ಹೇಳಿತ್ತು. ಆ ಅಧ್ಯಯನ ನಿಜವಾಗಿದ್ದ ಹಿನ್ನಲೆಯಲ್ಲಿ ಹೊಸ ಭವಿಷ್ಯವೂ ನಿಜವಾಗಬಹುದು ಎಂಬ ಆತಂಕ ಶುರುವಾಗಿದೆ.
Published by:
MAshok Kumar
First published:
April 25, 2021, 3:35 PM IST