ಅನ್ ಲಾಕ್ ಆದರೂ ತೆರೆಯದ ಕೆ. ಆರ್.‌ ಮಾರ್ಕೆಟ್, ಕಲಾಸಿಪಾಳ್ಯ ಮಾರ್ಕೆಟ್ ; ಸೆಪ್ಟೆಂಬರ್​ 1 ರವರೆಗೆ ಸರ್ಕಾರಕ್ಕೆ ರೈತರಿಂದ ಡೆಡ್ ಲೈನ್

ಸಂಜೆಯಾಗುತ್ತಿದ್ದಂತೆ ಪ್ರತಿಭಟನಾನಿರತರು ಸೆಪ್ಟೆಂಬರ್ 1ರಂದು ಮಾರುಕಟ್ಟೆ ತೆರೆಯದೇ ಹೋದರೆ ಅದರ ಮರುದಿನವೇ ನಾವೇ ಮಾರ್ಕೆಟ್ ಆರಂಭಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು‌.

news18-kannada
Updated:August 24, 2020, 6:24 PM IST
ಅನ್ ಲಾಕ್ ಆದರೂ ತೆರೆಯದ ಕೆ. ಆರ್.‌ ಮಾರ್ಕೆಟ್, ಕಲಾಸಿಪಾಳ್ಯ ಮಾರ್ಕೆಟ್ ; ಸೆಪ್ಟೆಂಬರ್​ 1 ರವರೆಗೆ ಸರ್ಕಾರಕ್ಕೆ ರೈತರಿಂದ ಡೆಡ್ ಲೈನ್
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್
  • Share this:
ಬೆಂಗಳೂರು(ಆಗಸ್ಟ್​. 24): ಲಾಕ್ ಡೌನ್ ಗೆ ಮುಚ್ಚಿದ್ದ ಬೆಂಗಳೂರಿನ ಕೆ ಆರ್ ಮಾರ್ಕೆಟ್ ಆನ್ ಲಾಕ್ ಆದರೂ ತೆರೆದಿಲ್ಲ. ಜನದಟ್ಟಣೆ ಹಿನ್ನೆಲೆ ಕೊರೋನಾ ಹರಡುವ ಆತಂಕಕ್ಕೆ ಕಳೆದ ಐದು ತಿಂಗಳಿನಿಂದ ಮುಚ್ಚಿತ್ತು.‌ ಇದರಿಂದ ಸಾವಿರಾರು ರೈತರು, ವ್ಯಾಪಾರಸ್ಥರು ಕಂಗಲಾಗಿದ್ದರು. ಈ ಕಾರಣಕ್ಕೆ ಇಂದು ಮಾರುಕಟ್ಟೆ ತೆರೆಯಬೇಕೆಂದು ಆಗ್ರಹಿಸಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ವ್ಯಾಪಾರಸ್ಥರು, ರೈತರು ಭಾರೀ ಪ್ರಮಾಣದಲ್ಲಿ ಜಮಾವಣೆಗೊಂಡು ಪ್ರತಿಭಟನೆಗಿಳಿದಿದ್ದರು‌. ಇಂದೇ ಮಾರ್ಕೆಟ್ ಆರಂಭಿಸ‌ಬೇಕೆಂದು ಬಿಗಿಪಟ್ಟು ಹಿಡಿದರು.

ಕೊರೋನಾ ಲಾಕ್ ಡೌನ್ ನಿಂದ ತತ್ತರಿಸಿದ್ದ ಎಲ್ಲ ರಂಗಗಳು ಮತ್ತೆ ಹಳಿಗೆ ಬರಲು ಯತ್ನಿಸುತ್ತಿವೆ. ಆದರೆ, ಅಗತ್ಯವಸ್ತು ಸೇವೆಯಡಿ ಬರುವ ಬೆಂಗಳೂರಿನ ಅತಿ ದೊಡ್ಡ ಮಾರುಕಟ್ಟೆ ಕೆ ಆರ್ ಮಾರ್ಕೆಟ್ ಮಾತ್ರ ಐದು ತಿಂಗಳಾದರೂ ಆರಂಭವಾಗಿಲ್ಲ. ಪ್ರತಿನಿತ್ಯ ಸಾವಿರಾರು ವ್ಯಾಪಾರಿಗಳು, ಕಾರ್ಮಿಕರ ಆಧಾರಸ್ತಂಭ ಮಾರ್ಕೆಟ್ ತೆರೆಯದೇ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿತ್ತು.‌ ಕೆ ಆರ್ ಮಾರ್ಕೆಟ್, ಪಕ್ಕದ ಕಲಾಸಿಪಾಳ್ಯ ಮಾರುಕಟ್ಟೆ ತೆರೆಯಲು ಸರ್ಕಾರ ಇನ್ನೂ ಸೂಚನೆ ನೀಡಿಲ್ಲ.

ಸೀಲ್ ಡೌನ್ ಆಗಿದ್ದ ಚಿಕ್ಕಪೇಟೆಗೆ ವ್ಯಾಪಾರ ಮಾಡಲು ಬಿಬಿಎಂಪಿ ಅವಕಾಶ ನೀಡಿದೆ. ಆದರೆ ಅದೆ ಮಾರ್ಕೆಟ್ ತೆರೆಯಲು ಯಾಕೆ ಅವಕಾಶ ನೀಡುತ್ತಿಲ್ಲ. ಇಂದೇ ಮಾರ್ಕೆಟ್ ತೆರೆಯಬೇಕೆಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಇನ್ನೂರಕ್ಕೂ ಹೆಚ್ಚು ರೈತರು, ಕೆ ಆರ್‌ಮಾರ್ಕೆಟ್ ಹಾಗೂ ಕಲಾಸಿಪಾಳ್ಯದ ವ್ಯಾಪಾರಸ್ಥರು, ಕಾರ್ಮಿಕರು, ಕೆಲ ಸಂಘಟನೆಗಳ ಸದಸ್ಯರು ಪ್ರತಿಭಟನೆ ಮಾಡಿದರು.

ಇಂದೇ ಮಾರ್ಕೆಟ್ ಆರಂಭಿಸಬೇಕೆಂದು ಪ್ರತಿಭಟನಾಕಾರರು ಪಟ್ಟುಹಿಡಿದು ಸಂಜೆಯವರೆಗೆ ಧರಣಿ ಕುಳಿತಿದ್ದರು. ಬೆಳಗ್ಗೆ ಕೆ ಆರ್ ಮಾರ್ಕೆಟ್ ನಿಂದ ಬಿಬಿಎಂಪಿ ಕಚೇರಿಯವರೆಗೆ ಪ್ರತಿಭಟನಾ ರ‍್ಯಾಲಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ಪೊಲೀಸರು ಕೆ ಆರ್‌ ಮಾರ್ಕೆಟ್ ನಲ್ಲಿ ಪ್ರತಿಭಟನಾಕಾರರರು ರ‍್ಯಾಲಿಗೆ ಅವಕಾಶ ನೀಡದ ಕಾರಣ ಮಾರ್ಕೆಟ್ ನಲ್ಲಿ ಧರಣಿ ಕುಳಿತರು.

ಇದನ್ನೂ ಓದಿ : ಡಿ ಕೆ ಶಿವಕುಮಾರ್ ಒಬ್ಬ ಕಳ್ಳ, ಅವರ ಫೋನ್ ನಾವ್ಯಾಕೆ ಟ್ಯಾಪ್ ಮಾಡೋಣ ; ಸಿ.ಪಿ.ಯೋಗೇಶ್ವರ್

ವಿಷಯ ತಿಳಿಯುತ್ತಿದ್ದಂತೆ ಪ್ರತಿಭಟನಾ ಸ್ಥಳಕ್ಕೆ ಬಿಬಿಎಂಪಿ ವಿಶೇಷ ಆಯುಕ್ತರಾದ ಮಂಜುನಾಥ್ ಹಾಗೂ ರವೀಂದ್ರ ಇಬ್ಬರೂ ಆಗಮಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿಕೊಂಡರು. ಈ ವೇಳೆ ರೈತ ಮುಖಂಡ ಕೋಡಿಹಳ್ಳಿ ಹಾಗೂ ಬಿಬಿಎಂಪಿ ಅಧಿಕಾರಿಗಳ ಮಧ್ಯೆ ಚರ್ಚೆಯೂ ಆಯಿತು. ಜನದಟ್ಟಣೆ ಹಾಗೂ ಸೀಲ್ ಡೌನ್ ಏರಿಯಾ ಕಾರಣ ಮಾರ್ಕೆಟ್ ತೆರೆಯಲು ಅವಕಾಶವಿದ್ದಿದ್ದಿಲ್ಲ. ಆದರೇ ಈಗ ಕೇಂದ್ರ ಸರ್ಕಾರದ ಸೂಚನೆಯಂತೆ ಸೆಪ್ಟೆಂಬರ್ 1 ರಿಂದ ಕೆ ಆರ್‌ ಮಾರ್ಕೆಟ್ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ತೆರೆಯಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು‌.ಆದರೆ ಬಿಬಿಎಂಪಿ ನಿರ್ಧಾರ ಖಂಡಿಸಿ ಕೆ ಆರ್ ಮಾರುಕಟ್ಟೆ ಬಳಿ ವ್ಯಾಪಾರಸ್ಥರು ಇಂದೇ ತೆರೆಯುವಂತೆ ಪ್ರತಿಭಟನೆ ಮುಂದುವರೆಸಿದರು.
ಪ್ರತಿಭಟನೆ ಕೈಬಿಡುವಂತೆ ಅಧಿಕಾರಿಗಳ ಮನವಿ ಮಾಡಿಕೊಂಡರೂ ಕ್ಯಾರೆ ಅನ್ನಲಿಲ್ಲ. ಇಂದಿನಿಂದಲೇ ಕೆ ಆರ್ ಮಾರುಕಟ್ಟೆ ತೆರೆಯುವಂತೆ ಒತ್ತಾಯಿಸಿ ಧರಣಿ ಮುಂದುವರೆಸಿದರು. ಪ್ರತಿಭಟನಾಕಾರರು ಕೈಬಿಡದೇ ಹೋದರೆ ಬಂಧಿಸಲು ವಾಹನಗಳು ಹಾಗೂ ಹೆಚ್ಚಿನ ಪೊಲೀಸರು ಹೆಚ್ಚಿನ ಭದ್ರತೆ ಮಾಡಿಕೊಂಡಿದ್ದರು. ಕೊನೆಗೆ ಸಂಜೆಯಾಗುತ್ತಿದ್ದಂತೆ ಪ್ರತಿಭಟನಾನಿರತರು ಸೆಪ್ಟೆಂಬರ್ 1ರಂದು ಮಾರುಕಟ್ಟೆ ತೆರೆಯದೇ ಹೋದರೆ ಅದರ ಮರುದಿನವೇ ನಾವೇ ಮಾರ್ಕೆಟ್ ಆರಂಭಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು‌.
Published by: G Hareeshkumar
First published: August 24, 2020, 6:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading