’ಗುಜರಾತ್‌ನಲ್ಲಿ COVID-19 ಪರಿಸ್ಥಿತಿ ಭಯಾನಕವಾಗಿದೆ’; ಅಹಮದಾಬಾದ್‌ ಹೈಕೋರ್ಟ್‌ ಕಳವಳ

ಹಿರಿಯ ಅಧಿಕಾರಿಗಳ ತಂಡವು ಗುಜರಾತ್‌ನ ಸರ್ಕಾರಿ ಆಸ್ಪತ್ರೆಗಳನ್ನು, ವಿಶೇಷವಾಗಿ ವಡೋದರಾ, ಭಾವನಗರ, ರಾಜ್‌ಕೋಟ್ ಮತ್ತು ಗಾಂಧಿನಗರದಲ್ಲಿರುವ ಆಸ್ಪತ್ರೆಗಳನ್ನು ಪರಿಶೀಲಿಸಬೇಕು ಎಂದು ಅಹಮದಾಬಾದ್‌ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

MAshok Kumar | news18-kannada
Updated:August 25, 2020, 2:52 PM IST
’ಗುಜರಾತ್‌ನಲ್ಲಿ COVID-19 ಪರಿಸ್ಥಿತಿ ಭಯಾನಕವಾಗಿದೆ’; ಅಹಮದಾಬಾದ್‌ ಹೈಕೋರ್ಟ್‌ ಕಳವಳ
ಸಾಂದರ್ಭಿಕ ಚಿತ್ರ.
  • Share this:
ಅಹಮದಾಬಾದ್‌ (ಆಗಸ್ಟ್‌ 25); ಗುಜರಾತ್‌ನಲ್ಲಿ COVID-19 ಪರಿಸ್ಥಿತಿ ಸಾಕಷ್ಟು ಭಯಾನಕವಾಗಿದೆ. ದಿನದಿಂದ ದಿನಕ್ಕೆ ಸೋಂಕು ಹರಡುವ ಮತ್ತು ಮೃತರ ಸಂಖ್ಯೆ ಏರುತ್ತಲೇ ಇದೆ ಎಂದು ಕಳವಳ ವ್ಯಕ್ತಪಡಿಸಿರುವ ಅಹಮದಾಬಾದ್‌ ಹೈಕೋರ್ಟ್, "ರಾಜ್ಯದಲ್ಲಿ ಕೊರೋನಾ ಆಘಾತವನ್ನು ತಡೆಯುವ ಸಲುವಾಗಿ ಶೀಘ್ರದಲ್ಲೇ ಹಿರಿಯ ಐಎಎಸ್‌ ಅಧಿಕಾರಿಗಳ ಸಮಿತಿಯನ್ನು ರಚಿಸಿ ತುರ್ತು ಕ್ರಮ ಜರುಗಿಸುವಂತೆ ಹಾಗೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ" ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಈ ಕುರಿತು ಸೋಮವಾರ ಅಂದರೆ ಇಂದು ಆದೇಶ ಹೊರಡಿಸಿರುವ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಜೆ.ಬಿ. ಪಾರ್ಡಿವಾಲಾ ಅವರಿದ್ದ ವಿಭಾಗೀಯ ಪೀಠ, "ಅಧಿಕಾರಿಗಳ ತಂಡ ಎಲ್ಲಾ ಸರ್ಕಾರಿ / ಸಿವಿಲ್ ಆಸ್ಪತ್ರೆಗಳಲ್ಲಿ ಇರುವ ಕೊರತೆಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಇದರ ಆಧಾರದಲ್ಲಿ ಸಮಗ್ರ ವರದಿಯನ್ನು ಸಿದ್ಧಪಡಿಸಬೇಕು. ಇದನ್ನು ಆಧಾರವಾಗಿಟ್ಟುಕೊಂಡು ಕೊರೋನಾ ಚಿಕಿತ್ಸೆಗೆ ಸಂಬಂಧಿಸಿದಂತೆ ಆಸ್ಪತ್ರೆಗಳಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಬಹುದು" ಎಂದು ಅಭಿಪ್ರಾಯಪಟ್ಟಿದೆ.

ಈ ಸಂದರ್ಭದಲ್ಲಿ ಗುಜರಾತ್‌ ಕೊರೋನಾ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯ, "ಗುಜರಾತ್ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಹೊರಹೊಮ್ಮುವ ಚಿತ್ರಣವು ಸಾಕಷ್ಟು ಭಯಾನಕವಾಗಿದೆ. COVID-19 ಸಾಂಕ್ರಾಮಿಕ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದರೂ, ಇನ್ನೂ ಅಗತ್ಯ ಯಂತ್ರೋಪಕರಣಗಳನ್ನು ಸಜ್ಜುಗೊಳಿಸಬೇಕಾಗಿದೆ ಮತ್ತು ಈ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ರಾಜ್ಯವು ಮತ್ತಷ್ಟು ಸಿದ್ಧವಾಗಬೇಕು" ಎಂದು ತಿಳಿಸಿದೆ.

ಹಿರಿಯ ಅಧಿಕಾರಿಗಳ ತಂಡವು ಗುಜರಾತ್‌ನ ಸರ್ಕಾರಿ ಆಸ್ಪತ್ರೆಗಳನ್ನು, ವಿಶೇಷವಾಗಿ ವಡೋದರಾ, ಭಾವನಗರ, ರಾಜ್‌ಕೋಟ್ ಮತ್ತು ಗಾಂಧಿನಗರದಲ್ಲಿರುವ ಆಸ್ಪತ್ರೆಗಳನ್ನು ಪರಿಶೀಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

"ಚಿಕಿತ್ಸೆ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ವಿವಿಧ ನಾಗರಿಕ ಆಸ್ಪತ್ರೆಗಳಲ್ಲಿ ಸಾಕಷ್ಟು ರೀತಿಯ ಸಮಸ್ಯೆಗಳಿವೆ ಇದೆ” ಎಂದು ನ್ಯಾಯಾಲಯ ಹೇಳಿದೆ. “ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಗುಜರಾತ್ ರಾಜ್ಯದ ಎಲ್ಲಾ ನಾಗರಿಕ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸದ್ಯದ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ಸಿದ್ಧಪಡಿಸುವಂತೆ ನಾವು ಸಮಿತಿಯ ಸದಸ್ಯರಿಗೆ ನಿರ್ದೇಶಿಸುತ್ತೇವೆ" ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ : ಪುಲ್ವಾಮ ದಾಳಿ ಪ್ರಕರಣ: ಎನ್ಐಎಯಿಂದ 5,000 ಪುಟಗಳ ಚಾರ್ಜ್​ಶೀಟ್ ಸಾಧ್ಯತೆ

ಸಮಿತಿಯ ಸದಸ್ಯರು ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದಿರುವ ಹೈಕೋರ್ಟ್, ಆಸ್ಪತ್ರೆಗಳ ವಿವರವಾದ ವರದಿಯನ್ನು ಮುಂದಿನ ವಿಚಾರಣೆಯ ದಿನವಾದ ಸೆಪ್ಟೆಂಬರ್ 4 ರೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.

ಗುಜರಾತ್‌ನಲ್ಲಿ ಇದುವರೆಗೆ 84,000 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ, ಈ ಮಾರಕ ವೈರಸ್‌ ಕಾರಣದಿಂದಾಗಿ ಈವರೆಗೆ 2,908 ಜನ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಭಾರತದಲ್ಲಿ ಅತಿಹೆಚ್ಚು ಕೊರೋನಾ ಪೀಡಿತರನ್ನು ಹೊಂದಿರುವ ರಾಜ್ಯ ಎಂಬ ಕುಖ್ಯಾತಿಗೂ ಗುಜರಾತ್ ಪಾತ್ರವಾಗಿದೆ.
Published by: MAshok Kumar
First published: August 25, 2020, 2:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading