news18-kannada Updated:April 15, 2021, 5:23 PM IST
ನಟ ಸೋನು ಸೂದ್
ಮುಂಬೈ (ಏ. 15): ಕಳೆದ ವರ್ಷ ಕೊರೋನಾ ಸಂಕಷ್ಟದಲ್ಲಿ ದೇಶದ ಜನರ ಸಹಾಯಕ್ಕಾಗಿ ನಿಂತವರು ಹೃದಯವಂತ ನಟ ಸೋನು ಸೂದ್. ಈಗ ದೇಶದಲ್ಲಿ ಕೊರೋನಾ ಎರಡನೇ ಅಲೆ ಎದ್ದಿದೆ. ಮತ್ತೆ ಸೋನು ಭಾರತೀಯರ ಸಂಕಷ್ಟಕ್ಕೆ ಹೆಗಲಾಗುತ್ತಿದ್ದಾರೆ. ದೇಶದ ಯಾವುದೇ ಭಾಗದಲ್ಲಿ ಜನ ಕೊರೋನಾ, ಲಾಕ್ಡೌನ್-ಕರ್ಫ್ಯೂನಿಂದ ಸಂಕಷ್ಟಕ್ಕೆ ಸಿಲುಕಿದ್ದರೆ ಅಲ್ಲೆಲ್ಲ ಕೇಳಿ ಬರುತ್ತಿರುವ ಒಂದೇ ಹೆಸರು ಸೋನು ಸೂದ್. ಈಗ ಇಂಧೋರ್ನಲ್ಲಿ ಆಕ್ಸಿಜನ್ ಕೊರತೆ ಸಮಸ್ಯೆ ಎದುರಿಸುತ್ತಿದ್ದ ರೋಗಿಗಳಿಗೆ ಸ್ಪಂದಿರುವ ಸೋನು 10 ಆಕ್ಸಿಜನ್ ಜನರೇಟರ್ಗಳನ್ನು ಕಳುಹಿಸಿಕೊಟ್ಟಿದ್ದಾರೆ. ನನ್ನ ದೇಶವಾಸಿಗಳು ಕೋವಿಡ್ ವೇಳೆ ನರಳಬಾರದು. ಸಾಧ್ಯವಾದಷ್ಟು ನಾನು ಸಹಾಯ ಮಾಡುವೆ. ಈ ಕಠಿಣ ಕಾಲದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವ ಅಗತ್ಯವಿದೆ ಎಂದು ಸೋನು ಹೇಳಿದ್ದಾರೆ. ಇಂಧೋರ್ ಮಾತ್ರವಲ್ಲ ನಿತ್ಯ ಟ್ವಿಟ್ಟರ್ ಮೂಲಕ ಸಹಾಯಕ್ಕಾಗಿ ಸೋನುಗೆ ಸಾವಿರಾರು ಜನ ಮೊರೆಯಿಡುತ್ತಾರೆ. ತಾಯಿಯ ಚಿಕಿತ್ಸೆಗಾಗಿ ಸಹಾಯ ಕೋರಿದ್ದ ಪುತ್ರನಿಗೆ ಸೋನು ಇತ್ತೀಚೆಗೆ ಸೋನು ಸಹಾಯ ಮಾಡಿದ್ದಾರೆ.
ಮತ್ತೊಬ್ಬ ಸೋಂಕಿತರಿಗೆ ಉಚಿತವಾಗಿ ರೆಮೆಡಿಸಿವರ್ ಇಂಜೆಕ್ಷನ್ಗಳನ್ನು ಉಚಿತವಾಗಿ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಎಲ್ಲೆಲ್ಲೂ ಈ ಇಂಜೆಕ್ಷನ್ಗಾಗಿ ಭಾರೀ ಬೇಡಿಕೆಯಿದ್ದು ಹಲವೆಡೆ ಇಂಜೆಕ್ಷನ್ನ ಕೊರತೆ ತಲೆದೂರಿದೆ. ಇದರಿಂದ ಸಮಸ್ಯೆ ಎದುರಿಸುವವರು ಸೋನುವಿನ ಬಳಿ ಇಂಜೆಕ್ಷನ್ಗಾಗಿ ಮನವಿ ಮಾಡುತ್ತಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುವ ಸೋನು ಅಗತ್ಯವಿರುವ ಔಷಧಿಗಳನ್ನು ತಲುಪಿಸಿ ಅಪತ್ಭಾಂದವ ಎನಿಸಿಕೊಂಡಿದ್ದಾರೆ.
ಕಲಿಯುಗದ ಕರ್ಣನಂತೆ ಕಾಣಿಸುತ್ತಿರುವ ಸೋನು ಅವರ ಹೃದಯವಂತಿಗೆ ಲಸಿಕೆ ಅಭಿಯಾನದ ರಾಯಭಾರಿಯನ್ನಾಗಿಸಿ ಗೌರವಿಸಲಾಗಿದೆ. ಸಾಮಾಜಿಕ ಕಳಕಳಿವುಳ್ಳ ಸೋನು ಅವರಿಗಿಂತ ಇನ್ಯಾವ ಸೂಪರ್ ಸ್ಟಾರ್ ಕೂಡ ಇದಕ್ಕೆ ಅರ್ಹರಲ್ಲ ಅಂತಿದ್ದಾರೆ ಅವರ ಅಭಿಮಾನಿಗಳು.
ಕಳೆದ ವರ್ಷ ಲಾಕ್ಡೌನ್ ವೇಳೆ ಊರುಗಳಿಗೆ ತೆರಳಲಾಗದೇ ಪರದಾಡುತ್ತಿದ್ದ ಸಾವಿರಾರು ವಲಸಿಗರಿಗೆ ಸೋನು ಸೂದ್ ಆಸರೆಯಾಗಿದ್ದರು. ಇದಕ್ಕಾಗಿ ಸೋನು ಕೋಟ್ಯಾಂತರ ರೂಪಾಯಿ ವ್ಯಯಿಸಿದ್ದರು. ಲಕ್ಷಾಂತರ ಮಂದಿಗೆ ಸಹಾಯ ಮಾಡಿದ ಸೋನುಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಲಾಗಿದೆ. ಮುಂಬೈನಿಂದ ಮೊಗಗೆ ತೆರಳುವ ವಿಮಾನದ ಮೇಲೆ ಅವರ ಭಾವಚಿತ್ರದೊಂದಿಗೆ ಧನ್ಯವಾದ ತಿಳಿಸಲಾಗಿದೆ. ಇದಕ್ಕೆ ಸೋನು ಮನತುಂಬಿ ವಂದಿಸಿದ್ದರು.
(ವರದಿ: ಕಾವ್ಯಾ. ವಿ)
Published by:
Seema R
First published:
April 15, 2021, 5:23 PM IST