news18-kannada Updated:April 19, 2021, 4:25 PM IST
ಬೆಂಗಳೂರು ಭಾಗದ ಜನಪ್ರತಿನಿಧಿಗಳ ಸಭೆ.
ಬೆಂಗಳೂರು: ಕೋವಿಡ್ ನಿಯಂತ್ರಣ ಸಂಬಂಧಿಸಿದಂತೆ ಬೆಂಗಳೂರು ಭಾಗದ ಜನಪ್ರತಿನಿಧಿಗಳ ಮಹತ್ವದ ಸಭೆ ವಿಧಾನಸೌಧಲ್ಲಿ ನಡೆಯಿತು. ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಸಭೆದ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಹ ಆಸ್ಪತ್ರೆಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು. ಸಭೆಯ ಪ್ರಾರಂಭದಲ್ಲೇ ಮಾತನಾಡಿದ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಅವರು, ಸರ್ವಪಕ್ಷ ಸಭೆಯನ್ನು ಈ ಹಿಂದೆಯೇ ಕರೆಯಬೇಕಿತ್ತು. ನಮ್ಮನ್ನು ಕರೆದಿದ್ದರೆ ನಾವು ಸಲಹೆ ಕೊಡುತ್ತಿದ್ದೆವು. ಕೊರೋನಾ ನಿಯಂತ್ರಣ ಮಾಡೋಕೆ ನಿಮಗೂ ಐಡಿಯಾ ಸಿಗ್ತಿತ್ತು. ಈಗ ಅಂತಿಮ ಹಂತಕ್ಕೆ ಬಂದಾಗ ನಾವು ನೆನಪಾದ್ವಾ? ಹಿಂದೆಯೇ ಸರ್ಕಾರ ನಮ್ಮ ಸಲಹೆಗಳನ್ನು ಪಡೆಯಬಹುದಿತ್ತು ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮತ್ತೆ ಲಾಕ್ ಡೌನ್ ಮಾಡ್ತಾರೆ ಅಂತ ವರದಿಯಾಗುತ್ತಿದೆ. ಲಾಕ್ ಡೌನ್ ಮಾಡೋಕೆ ನಮ್ಮ ಪಕ್ಷದ ಒಪ್ಪಿಗೆಯಿಲ್ಲ. ಲಾಕ್ ಡೌನ್ ಮಾಡಿದರೆ ಜನಸಾಮಾನ್ಯರಿಗೆ ಕಷ್ಟವಾಗಲಿದೆ. ಸರ್ಕಾರ ನಡೆಸೋಕೆ ನಿಮಗೂ ಆಗಲ್ಲ. ಕಟ್ಟುನಿಟ್ಟಿನ ಕ್ರಮಗಳನ್ನು ಸರಿಯಾಗಿ ಅನುಷ್ಠಾನ ಮಾಡಿ. ಅದಕ್ಕೆ ನಮ್ಮ ಪಕ್ಷದ ಸಂಪೂರ್ಣ ಒಪ್ಪಿಗೆ ಇರುತ್ತದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್ ಸರಿಯಾಗಿ ಸಿಗುತ್ತಿಲ್ಲ. ಮೊದಲು ಹಾಸಿಗೆ ಕೊರತೆಯಾಗದಂತೆ ಗಮನಹರಿಸಿ. ಆಟದ ಮೈದಾನ, ಪಾರ್ಕ್ ಸಂಪೂರ್ಣ ಬಂದ್ ಮಾಡಿ. ಬಾರ್, ಪಬ್, ಜಿಮ್ ಗಳಲ್ಲಿ ಕಠಿಣ ರೂಲ್ಸ್ ತನ್ನಿ. ಜನ ಹೆಚ್ಚು ಸೇರೋದಕ್ಕೆ ಅವಕಾಶ ಮಾಡಿಕೊಡಬೇಡಿ. ಹೊರಗಿನವರ ಓಡಾಟಕ್ಕೆ ಬೇಕಾದರೆ ಕಡಿವಾಣ ಹಾಕಿ ಎಂದು ಸರ್ಕಾರಕ್ಕೆ ರಾಮಲಿಂಗಾರೆಡ್ಡಿ ಸಲಹೆ ನೀಡಿದರು.
ಇದನ್ನು ಓದಿ: ಸಿಎಂ ಆಸ್ಪತ್ರೆಯಲ್ಲಿದ್ದಾರೆ, ಸರ್ಕಾರ ಐಸಿಯುನಲ್ಲಿದೆ; ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ
ರಾತ್ರಿ 8 ರಿಂದ ಬೆಳಿಗ್ಗೆ 6 ರವರೆಗೆ ನೈಟ್ ಕರ್ಪ್ಯೂ ವಿಸ್ತರಣೆಗೆ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಿದರು. ನೈಟ್ ಕರ್ಫ್ಯೂಯಿಂದ ಏನೂ ಪ್ರಯೋಜನ ಇಲ್ಲ. ಕೊರೋನ ನೈಟ್ ಮಾತ್ರ ಇರುತ್ತಾ? ಎಂದು ಪ್ರಶ್ನೆ ಮಾಡಿದರು. ಸಭೆಯಲ್ಲಿ ಭಾಗಿಯಾಗಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರು ಎಲ್ಲರ ಪ್ರಾಯವನ್ನು ಕೇಳಿಸಿಕೊಂಡು, ನಾನು ಕೊನೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.
ಆಕ್ಸಿಜನ್ ಕೊರತೆ, ಬೆಡ್ ಗಳ ಕೊರತೆ ಬಗ್ಗೆ ಸರ್ಕಾರವನ್ನು ಸಂಸದ ಡಿ.ಕೆ.ಸುರೇಶ್ ಅವರು ತರಾಟೆಗೆ ತೆಗೆದುಕೊಂಡರು. ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ ಇದೆ. ಸಚಿವರ ಪಿಎ ವೆಂಟಿಲೇಟರ್ ಸಿಗದೇ ಸಾವನ್ನಪ್ಪುತ್ತಾರೆ ಎಂದರೆ ಏನರ್ಥ. ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷರೇ ಆಕ್ಸಿಜನ್ ಕೊರತೆ ಇದೆ ಅಂತಾ ಹೇಳ್ತಾರೆ. ಹಾಗಾದರೆ ಸರ್ಕಾರ ಏನು ಮಾಡ್ತಿದೆ ಎಂದು ಪ್ರಶ್ನೆ ಮಾಡಿದರು.
ಮಸೀದಿಗಳಲ್ಲಿ ಕೋವಿಡ್ ನಿಯಮಗಳ ಪಾಲನೆ ಆಗ್ತಿದೆ. ಸಂಪೂರ್ಣವಾಗಿ ಮಸೀದಿಗಳನ್ನು ಬಂದ್ ಮಾಡದಂತೆ ಇಬ್ರಾಹಿಂ, ಜಮೀರ್, ರಿಜ್ವಾನ್ ಅರ್ಷದ್ ಮನವಿ ಮಾಡಿದರು. ಹಾಗೂ ಈದ್ಗಾಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಜತೆ ರಮ್ಜಾನ್ ಹಬ್ಬದ ಆಚರಣೆ ಅವಕಾಶ ಕೊಡುವಂತೆಯೂ ಮನವಿ ಮಾಡಿದರು.
Published by:
HR Ramesh
First published:
April 19, 2021, 4:25 PM IST