ನವ ದೆಹಲಿ (ಏಪ್ರಿಲ್ 26); ಭಾರತದಲ್ಲಿ ಕೋವಿಡ್ ಎರಡನೇ ಅಲೆ ದಿನಿದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ದಿನವೊಂದಕ್ಕೆ 3.5 ಲಕ್ಷ ಜನ ಸೋಂಕು ಪೀಡಿತ ರಾಗುತ್ತಿದ್ದಾರೆ. ದಿಸಾವು ನೋವುಗಳ ಸಂಖ್ಯೆಯೂ ಅಧಿಕವಾಗುತ್ತಲೇ ಇದೆ. ಬೆಡ್ ಸಿಗದೆ, ಆಕ್ಸಿಜನ್ ಇಲ್ಲದೆ ಬಡವರು ಮತ್ತು ಮಧ್ಯಮವರ್ಗ ಅಸಹಾಯಕತೆಯಲ್ಲಿ ಆಸ್ಪತ್ರೆಗಳ ಮುಂದೆ, ಚಿತಾಗಾರಗಳಲ್ಲಿ ಕಾಯುತ್ತಿವೆ. ಆದರೆ ಕಳೆದ ವಾರದಿಂದ ಈ ದೇಶದ ನೂರಾರು ಅತಿ ಶ್ರೀಮಂತರು ಖಾಸಗಿ ವಿಮಾನಗಳನ್ನು ಬುಕ್ ಮಾಡಿ ವಿದೇಶಗಳಿಗೆ ಸದ್ದಿಲ್ಲದೇ ಪಲಾಯನ ಮಾಡುತ್ತಿದ್ದಾರೆ ಎಂದು ಬ್ಯುಸಿನೆಸ್ ಇನ್‌ಸೈಡರ್ ವರದಿ ಮಾಡಿದೆ.
ವಿವಿಧ ದೇಶಗಳು ಪ್ರಯಾಣ ನಿರ್ಬಂಧ ಹೇರುತ್ತಿರುವುದರಿಂದ ಅವಸರವಸರದಲ್ಲಿ ಈ ಸೂಪರ್ ಸಿರಿವಂತರು ಯಥೇಚ್ಛ ಹಣ ನೀಡಿ ಖಾಸಗಿ ಜೆಟ್‌ಗಳ ಮೂಲಕ ಸುರಕ್ಷಿತ ತಾಣಗಳನ್ನು ಸೇರುತ್ತಿದ್ದಾರೆ.
ಯುನೈಟೆಡ್ ಅರಬ್ ಸಂಸ್ಥಾನವು (ಯುಎಇ) ಹೋಲಿಕೆಯಲ್ಲಿ ಭಾರತಕ್ಕೆ ಸಮೀಪ ಇರುವುದರಿಂದ ಮತ್ತು ಅಲ್ಲಿ ಸುರಕ್ಷತೆಯೂ ಇರುವುದರಿಂದ ಬಹುತೇಕರ ಫೇವರಿಟ್ ದೇಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತೆರಳುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ಲಿ ಅವರು ದುಬಾರಿ ಹಣ ಕೊಟ್ಟು ವ್ಯಾಕ್ಸಿನ್ ಪ್ಲಸ್ ವೆಕೇಷನ್ (ಲಸಿಕೆ ಮತ್ತು ರಜಾದಿನಗಳು) ಎರಡನ್ನು ಪಡೆಯುತ್ತಿದ್ದಾರೆ.
ಏಪ್ರಿಲ್ 25ರಿಂದ 10 ದಿನಗಳ ಕಾಲ ಭಾರತದಿಂದ ಪ್ರಯಾಣ ನಿರ್ಬಂಧ ವಿಧಿಸುವುದಾಗಿ ಯುಎಇ ಕಳೆದ ವಾರ ಘೋಷಿಸಿದ ನಂತರ ಈ ಸುಪರ್ ಸಿರಿವಂತರು ಎದ್ದು ಬಿದ್ದು ಖಾಸಗಿ ವಿಮಾನ, ಜೆಟ್‌ಗಳನ್ನು ಬುಕ್ ಮಾಡಿ ಹಾರಿ ಹೋಗಿದ್ದಾರೆ.
ಶುಕ್ರವಾರ ಈ ಕುರಿತು ಮಾತನಾಡಿರುವ ಖಾಸಗಿ ಚಾರ್ಟರ್ ಕಂಪನಿ ‘ಏರ್ ಚಾರ್ಟರ್’ ಅಧಿಕಾರಿ, "ನಾಳೆ (ಶನಿವಾರ ಏಪ್ರಿಲ್ 24) ನಮ್ಮ ಕಂಪನಿಯಿಂದ 12 ವಿಮಾನಗಳು ದುಬೈಗೆ ಹೊರಡಲಿದ್ದು ಎಲ್ಲವೂ ಭರ್ತಿಯಾಗಿವೆ" ಎಂದು ತಿಳಿಸಿದ್ದಾರೆ.
ಇನ್ನೊಂದು ಖಾಸಗಿ ಕಂಪನಿ ಎಂಥ್ರಾಲ್ ಏವಿಯೇಷನ್, ನೂರಾರು ಬುಕಿಂಗ್ ಬೇಡಿಕೆಗಳು ಕಳೆದ ಹಲವು ದಿನಗಳಿಂದ ಬಂದಿವೆ ಎಂದಿದೆ. ಏಪ್ರಿಲ್ 25ರ ನಿರ್ಬಂಧಕ್ಕೂ ಮುಂಚೆ ನೂರಾರು ಸುಪರ್ ಸಿರಿವಂತರು ದುಬೈ ಸೇರಿದ್ದಾರೆ. ಈಗ ಮತ್ತೆಲ್ಲಿ ನಿರ್ಬಂಧವಿಲ್ಲವೋ ಅಂತಹ ಕಡೆ ಖಾಸಗಿ ಜೆಟ್‌ಗಳ ಮೂಲಕ ಹಾರಲು ತಯಾರಿ ನಡೆಸಿದ್ದಾರೆ.
ಮುಂಬೈನಿಂದ ದುಬೈಗೆ 13 ಸೀಟುಗಳ ಜೆಟ್ ಬಾಡಿಗೆ 38 ಸಾವಿರ ಡಾಲರ್! 6 ಸೀಟಿನದ್ದಾರೆ 33 ಸಾವಿರ ಡಾಲರ್ ತೆರಬೇಕಾಗಿದೆ ಎನ್ನಲಾಗಿದೆ. ಥೈಲ್ಯಾಂಡ್‌ಗೂ ಅನೇಕರು ಪಲಾಯನ ಮಾಡಿದ್ದರೆ. ಸಂಡೇ ಟೈಮ್ಸ್ ಪ್ರಕಾರ, ಹಲವು ದಿನಗಳ ಮೊದಲೇ ಕೆಲವರು ದುಬಾರಿ ದರ ತೆತ್ತು (9 ತಾಸಿನ ಪ್ರಯಾಣಕ್ಕೆ 100 ಸಾವಿರ ಪೌಂಡ್ ಬಾಡಿಗೆ) ಬ್ರಿಟನ್‌ಗೆ ಓಡಿದ್ದಾರೆ. ಇವರೆಲ್ಲ ತಮ್ಮದೇ ಗುಂಪು ರಚಿಸಿಕೊಂಡ ವಿಮಾನ ಅಥವಾ ಜೆಟ್ ಬಾಡಿಗೆ ಪಡೆದು ಹಾರಿದ್ದಾರೆ.ಈಗ ಪ್ರಯಾಣ ನಿರ್ಬಂಧ ಹೇರದ ಯಾವುದಾದರೂ ಸುರಕ್ಷಿತ ತಾಣವನ್ನು ಸೂಪರ್ ಸಿರಿವಂತರು ಹುಡುಕುತಿದ್ದಾರೆ ಎನ್ನಲಾಗಿದೆ. ಕೋವಿಡ್ ಅಂತಲ್ಲ, ದೇಶದ ಕಷ್ಟಗಳಿಗೆ ಇವರೆಲ್ಲ ಸದಾ ಪಲಾಯನ ಹೇಳುತ್ತಲೇ ಬಂದವರು ಅಲ್ವೇ ಎಂಬ ಟೀಕೆಗಳು ಕೇಳಿಬಂದಿದೆ.
ಭಾರತದಲ್ಲಿ ಕೊರೋನಾತಂಕ:
ಭಾರತದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ. ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಹಾಗೂ ಏಪ್ರಿಲ್ 17ರಿಂದ ದಿನ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ಮೂರೂವರೆ ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ.
ಭಾನುವಾರ 3,52,991 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 2,19,272 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,73,13,163ಕ್ಕೆ ಏರಿಕೆ ಆಗಿದೆ. ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ. ಭಾನುವಾರ 2,812 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 1,95,123ಕ್ಕೆ ಏರಿಕೆ ಆಗಿದೆ.
ಇದನ್ನೂ ಓದಿ: CoronaVirus: ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಭೇಟಿಯಾದ ಮೋದಿ; ಕೊರೋನಾ ಎದುರಿಸಲು ಸಶಸ್ತ್ರ ಪಡೆಗಳ ಸಿದ್ಧತೆ!
ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಹಾಕುವ ಕೆಲಸವನ್ನು ಹಂತ ಹಂತವಾಗಿ ತೀವ್ರಗೊಳಿಸಲಾಗುತ್ತದೆ. ಈವರೆಗೆ ದೇಶಾದ್ಯಂತ ಒಟ್ಟು 14,19,11,223 ಜನರಿಗೆ ಲಸಿಕೆ ಹಾಕಲಾಗಿದೆ.
ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಅದಾದ ಬಳಿಕ ಅದು ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಈವರೆಗಿನ ದಾಖಲೆ ಆಗಿತ್ತು.