- News18 Kannada
- Last Updated: April 15, 2021, 4:34 PM IST
- K PUTTAPPA News18 Media
ಮೈಸೂರು (ಏ. 15): ಸಾಂಸ್ಕೃತಿಕನಗರಿಯಲ್ಲಿ ಹೆಲಿಟೂರಿಸಂಗಾಗಿ ನೂತನ ಹೆಲಿಪ್ಯಾಡ್ ನಿರ್ಮಿಸಲು ಮರಗಳನ್ನ ಕಡಿಯಲು ಮುಂದಾಗಿರುವ ಪ್ರವಾಸೋದ್ಯಮ ಇಲಾಖೆಯ ಚಿಂತನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮರ ಕಡಿದು ಹೆಲಿಟೂರಿಸಂ ಮಾಡುವ ಯೋಜನೆ ವಿರೋಧಿಸುವವರ ಸಾಲಿಗೆ ಇದೀಗ ಸ್ಟಾರ್ ನಟರು ಸೇರಿಕೊಂಡಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್, ಸರ್ಕಾರ ಈ ಯೋಜನೆಯನ್ನ ಪರಾಮರ್ಶೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿರುವ ನಟ ದುನಿಯಾ ವಿಜಯ್. ಮರ ಕಡಿದು ಹೆಲಿಪ್ಯಾಡ್ ನಿರ್ಮಾಣ ಮಾಡುವುದಕ್ಕೆ ನನ್ನ ವಿರೋಧ ಇದೆ ಅಂತ ನೇರವಾಗಿ ಸರ್ಕಾರದ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಸೇವ್ ಮೈಸೂರು ಕ್ಯಾಂಪೈನ್‌ಗೆ ಬೆಂಬಲಿಸಿ ಪೋಸ್ಟ್ ಹಾಕಿದ ದುನಿಯಾ ವಿಜಯ್ ಅಭಿಪ್ರಾಯ ಹೀಗಿದೆ...
ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡುವ ಸಲುವಾಗಿ ಲಲಿತ ಮಹಾಲ್ ಹೋಟೆಲ್ ಮುಂಭಾಗದ ಮರಗಳನ್ನು ಕಡಿಯುವ ವಿಚಾರ ಗಮನಕ್ಕೆ ಬಂತು. ನಾವುಗಳು ಮರ ಬೆಳೆಸುವುದಕ್ಕೆ ಆಗದಿದ್ದರೂ ಮರ ಕತ್ತರಿಸಲು ಮುಂದಾಗಬಾರದು. ಆ ಜಾಗದಲ್ಲಿ ಮರಗಳು ಇರುವುದಕ್ಕೆ ಆ ಜಾಗ ಅಷ್ಟು ಸುಂದರವಾಗಿ ಕಾಣುವುದು. ಶೂಟಿಂಗ್ ಟೈಂ ಸಾಕಷ್ಟು ಬಾರಿ ಜಾಗಕ್ಕೆ ಭೇಟಿ ನೀಡಿದ್ದೇನೆ. ಆ ಜಾಗ ನೋಡಿದರೆ ಖುಷಿ ಆಗುತ್ತದೆ. ಈ ಯೋಜನೆಯನ್ನ ಮತ್ತೊಮ್ಮೆ ಪರಾಮರ್ಶೆ ಮಾಡಿ, ಮರ ಕಡಿಯುವುದನ್ನು ಬಿಟ್ಟು ಪರ್ಯಾಯವಾಗಿ ಹೆಲಿ ಟೂರಿಸಂ ಮಾಡುವ ಯೋಜನೆ ರೂಪಿಸಬೇಕು. ಸರ್ಕಾರದ ಅಭಿವೃದ್ಧಿ ಯೋಜನೆಗೆ ನಮ್ಮ ಬೆಂಬಲ ಹೇಗಿರುತ್ತದೆಯೋ ಅದೇ ರೀತಿ ಮರ ಕಡಿದು ಪರಿಸರ ಹಾಳು ಮಾಡಿ ಹೆಲಿ ಟೂರಿಸಂ ಮಾಡುವುದಕ್ಕೆ ಅಷ್ಟೆ ವಿರೋಧ ಇರುತ್ತದೆ. ಸೇವ್ ಮೈಸೂರು ಕ್ಯಾಂಪೈನ್‌ಗೆ ನನ್ನ ಬೆಂಬಲ ಇದೆ. ಸರ್ಕಾರ ಮತ್ತೆ ಯೋಚನೆ ಮಾಡಿ ಯೋಜನೆ ಕೈಗೆತ್ತಿಕೊಳ್ಳಲಿ... ಎಂದು ಸರ್ಕಾರಕ್ಕೆ ಸಲಹೆ ನೀಡಿ ಸೇವ್ ಮೈಸೂರು ಕ್ಯಾಂಪೈನ್‌ಗೆ ನಟ ದುನಿಯಾ ವಿಜಯ್ ಬೆಂಬಲಿಸಿ ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ.
ಈ ಜೊತೆ ಮೈಸೂರಿನಲ್ಲಿ ಹೆಲಿ ಟೂರಿಸಂಗೆ ವೃಕ್ಷ ನಾಶ ವಿಚಾರವಾಗಿ ಬಿಜೆಪಿಗರಿಂದಲೇ ವಿರೋಧ ಹೆಚ್ಚಾಗಿದೆ. ಸಂಸದ, ಜಿಲ್ಲಾಉಸ್ತುವಾರಿ ಸಚಿವರು ನಂತರ, ಕೆಲ ಸ್ಥಳೀಯ ನಾಯಕರಿಂದಲೂ ವಿರೋಧ ವ್ಯಕ್ತಪಡಿಸಿದ್ದಾರೆ., ದೇವರಾಜ ಅರಸು ನಿಗಮದ ಅಧ್ಯಕ್ಷ ಕೌಟಿಲ್ಯ ರಘು ಕೂಡ ಯೋಜನೆಯನ್ನ ವಿರೋಧ ಮಾಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಕೌಟಿಲ್ಯ ರಘು. ಮರಗಳನ್ನು ಕಡಿದು ಹೆಲಿಪ್ಯಾಡ್ ನಿರ್ಮಿಸುವ ಅನಿವಾರ್ಯತೆ ಇಲ್ಲ, ಬೇಕಿದ್ದರೆ ಪರ್ಯಾಯ ಸ್ಥಳ ಹುಡುಕಲಿ. ಸಸ್ಯ ಸಂಪತ್ತು ಉಳಿಸಬೇಕಿರುವುದು ನಮ್ಮ ಮೊದಲ ಆದ್ಯತೆ ಆಗಬೇಕು, ಒಂದು ವೇಳೆ ಮರಗಳನ್ನು ಕಡಿದರೇ ನನ್ನ ಆಕ್ಷೇಪ ಇದೆ ಎಂದು ಬಹಿರಂಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾರಂಪರಿಕ ನಗರ ಮೈಸೂರಿನ ನಾಗರೀಕನಾಗಿ ನನ್ನ ವಿರೋಧ ಇದೆ ಎಂದು ಹೇಳುವ ಮೂಲಕ ಹೆಲಿ ಟೂರಿಸಮ್ ಬಗ್ಗೆ ಅಪಸ್ವರ ಎತ್ತಿದ್ದಾರೆ.