- News18
- Last Updated: March 25, 2021, 12:43 PM IST
ನವದೆಹಲಿ(ಮಾ. 25): ಕೋವಿಡ್ ಸಂಕಷ್ಟದಿಂದ ಪ್ರಪಾತಕ್ಕೆ ಧುಮುಕಿದ್ದ ಭಾರತದ ಆರ್ಥಿಕತೆ ಕೆಲ ತಿಂಗಳುಗಳಿಂದ ಚೇತರಿಸಿಕೊಳ್ಳುತ್ತಿದೆ. ಮುಂಬರುವ ಹಣಕಾಸು ವರ್ಷದಲ್ಲಿ ತಾನು ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜಿಡಿಪಿ ಬೆಳವಣಿಗೆ ಹೊಂದಲಿದೆ ಎಂದು ಫಿಚ್ ಸಂಸ್ಥೆ ಹೇಳಿದೆ. ಏಪ್ರಿಲ್ 1ರಿಂದ ಪ್ರಾರಂಭವಾಗುವ 2021-22ರ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 12.8 ರಷ್ಟು ಅಭಿವೃದ್ಧಿ ಹೊಂದಬಹುದು ಎಂದು ಫಿಚ್ ಸಂಸ್ಥೆಯ ಗ್ಲೋಬಲ್ ಎಕನಾಮಿಕ್ ಔಟ್ಲುಕ್ ವರದಿಯಲ್ಲಿ ಅಂದಾಜು ಮಾಡಿದೆ. ಈ ಮುಂಚೆ ಅದು ಇದೇ ಅವಧಿಯಲ್ಲಿ ಶೇ. 11ರ ದರದಲ್ಲಿ ಜಿಡಿಪಿ ಬೆಳವಣಿಗೆಯಾಗಬಹುದು ಎಂದು ಹೇಳಿತ್ತು. ಇದೀಗ ಭಾರತದಲ್ಲಿ ಆರ್ಥಿಕತೆ ನಿರೀಕ್ಷೆಮೀರಿ ಚೇತರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಫಿಚ್ ತನ್ನ ಅಂದಾಜನ್ನು ಪರಿಷ್ಕರಿಸಿದೆ.
“2020ರ ವರ್ಷದ ಎರಡನೇ ಅವಧಿಯಲ್ಲಿ ಭಾರತದ ಜಿಡಿಪಿ ಚೇತರಿಕೆ ಕಂಡಿದೆ. ಕೋವಿಡ್ ಬಿಕ್ಕಟ್ಟಿಗೆ ಮುಂಚೆ ಇದ್ದ ಮಟ್ಟಕ್ಕಿಂತ ತುಸು ಮೇಲೇರಿದೆ. 2021-22ರ ವರ್ಷಕ್ಕೆ ಶೇ. 11ರಷ್ಟು ಜಿಡಿಪಿ ಪ್ರಗತಿ ಕಾಣಬಹುದು ಎಂದು ನಾವು ಮಾಡಿದ್ದ ಅಂದಾಜನ್ನು ಪರಿಷ್ಕರಿಸಿದ್ದು ಜಿಡಿಪಿ ಶೇ. 12.8ರಷ್ಟು ಬೆಳವಣಿಗೆ ಹೊಂದಬಹುದು ಎಂಬ ನಿರೀಕ್ಷೆಗೆ ಬಂದಿದ್ದೇವೆ… ಆದರೂ ಕೋವಿಡ್ ಬಿಕ್ಕಟ್ಟಿಗೆ ಮುಂಚೆ ನಾವು ಮಾಡಿದ್ದ ಅಂದಾಜಿಗಿಂತ ಜಿಡಿಪಿ ಕೆಳಗೇ ಉಳಿಯಲಿದೆ” ಎಂದು ಫಿಚ್ ರೇಟಿಂಗ್ಸ್ನ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Kerala BJP - ಕೇರಳದಲ್ಲಿ ಬಿಜೆಪಿಗೆ ಅಧಿಕಾರ ಅಥವಾ ಕಿಂಗ್ ಮೇಕರ್: ಮೆಟ್ರೋಮ್ಯಾನ್ ಇ ಶ್ರೀಧರನ್ ವಿಶ್ವಾಸ
ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು ಹಾಗೂ ವಿವಿಧ ರಾಜ್ಯಗಳಲ್ಲಿ ನಿರ್ಬಂಧಗಳನ್ನ ಹಂತ ಹಂತವಾಗಿ ಸಡಿಲಿಸಿದ ಪರಿಣಾಮ 2020ರ ವರ್ಷಾಂತ್ಯದಲ್ಲ ಆರ್ಥಿಕತೆ ಬಹಳ ವೇಗವಾಗಿ ಬೆಳೆದಿದೆ. 2021ರಲ್ಲಿ ಆಶಾದಾಯಕ ಆರಂಭ ಪಡೆದಿದೆ. ಆದಾಗ್ಯೂ ಇತ್ತೀಚೆಗೆ ಹೊಸ ಕೋವಿಡ್ ಪ್ರಕರಣಗಳು ಬಹಳ ಏರಿಕೆ ಕಾಣುತ್ತಿರುವುದರಿಂದ 2021ರಲ್ಲಿ ಆರ್ಥಿಕ ಬೆಳವಣಿಗೆಯ ವೇಗ ತುಸು ನಿಧಾನಗೊಳ್ಳುವ ಸಾಧ್ಯತೆ ನಮಗೆ ತೋರಿದೆ ಎಂದು ಫಿಚ್ ವರದಿ ಹೇಳಿದೆ.
2021ರ ವರ್ಷದ ಮೊದಲಾರ್ಧದ ಅವಧಿಯಲ್ಲಿ ಭಾರತದ ಕೈಗಾರಿಕಾ ಉತ್ಪನ್ನ ಶಕ್ತಿಗೆ ಜಾಗತಕ ಆಟೋ ಚಿಪ್ ಕೊರತೆ ಕಾಡುವ ಸಾಧ್ಯತೆ ಇದೆ. ಹಣಕಾಸು ವಲಯದ ದೌರ್ಬಲ್ಯದಿಂದಾಗಿ ದೇಶದಲ್ಲಿ ಹಣದ ಹರಿವನ್ನು ಕಡಿಮೆಗೊಳಿಸಬಹುದು. ಎಂದಿರುವ ಫಿಚ್ ಸಂಸ್ಥೆ, ಕೋವಿಡ್ಗೆ ಮುಂಚೆ ಇದ್ದ ಜಿಡಿಪಿ ಬೆಳವಣಿಗೆ ದರಕ್ಕೆ ಹೋಲಿಸಿದರೆ 2023ರ ಕ್ಯಾಲೆಂಡರ್ ವರ್ಷದಲ್ಲಿ ಜಿಡಿಪಿ ಶೇ. 5.8ರ ಬೆಳವಣಿಗೆಗೆ ಬಂದು ನಿಲ್ಲಬಹುದು. ಇದು ನಮ್ಮ ಆಗಿನ ಅಂದಾಜಿಗಿಂತ ತುಸು ಕಡಿಮೆ ಆಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.