- News18 Kannada
- Last Updated: April 3, 2021, 7:16 AM IST
ಸಾಮಾನ್ಯವಾಗಿ ಮಳೆಗಾಲದ ಅವಧಿಯಲ್ಲಿ ಅನಾರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಅನೇಕರಿಗೆ ಗಂಟಲಿನ ಸೋಂಕು ಬಾಧಿಸುತ್ತದೆ. ಇದರಿಂದ ಆಹಾರ ಸೇವಿಸುವುದು ಇರಲಿ, ನೀರು ಕುಡಿಯುವುದು ಕೂಡ ಕಷ್ಟವಾಗುತ್ತದೆ. ಇಂತಹ ಸಮಸ್ಯೆ ಕಾಣಿಸಿಕೊಂಡ್ರೆ ನೀವು ಕೆಲವೊಂದು ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಗಂಟಲು ನೋವು / ಗಂಟಲು ಕಿರಿಕಿರಿ ಕಾಣಿಸಿಕೊಳ್ಳುತಿದ್ರೆ ಇನ್ಮುಂದೆ ಹೀಗೆ ಮಾಡಿ.
- ಗಂಟಲು ನೋವಿನಿಂದ ಬಳಲುತ್ತಿದ್ರೆ ಬೆಚ್ಚಗಿನ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ. ಇದರಿಂದ ಗಂಟಲಿನಲ್ಲಿರುವ ಬ್ಯಾಕ್ಟೀರಿಯಾಗಳು ನಿರ್ನಾಮವಾಗುತ್ತದೆ. ಹಾಗೆಯೇ ಸ್ನಾಯುಗಳು ಸಡಿಲಗೊಂಡು ನೋವು ನಿವಾರಣೆಯಾಗುತ್ತದೆ.
- ಗಂಟಲು ನೋವಿಗೆ ಜೇಷ್ಠ ಮಧು ಉತ್ತಮ ಮನೆಮದ್ದು. ಇದರ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ಮಿಶ್ರ ಮಾಡಿ ಕುಡಿಯುವುದರಿಂದ ಗಂಟಲು ಒಣಗುವುದು ಮತ್ತು ನೋವು ಕಡಿಮೆಯಾಗುತ್ತದೆ.
- ತುಳಸಿ ಎಲೆಗಳಲ್ಲಿ ಅಪಾರವಾದ ಔಷಧೀಯ ಗುಣಗಳು ಕಂಡು ಬರುತ್ತವೆ. ಈ ಎಲೆಗಳನ್ನು ಕಷಾಯ ಮಾಡಿ ಕುಡಿಯುವುದರಿಂದ ಸಹ ಗಂಟಲು ನೋವನ್ನು ಶಮನಗೊಳಿಸಬಹುದು. ಅಥವಾ ಬಿಸಿ ನೀರಿನಲ್ಲಿ ತುಳಸಿ ಎಲೆಗಳನ್ನು ಹಾಕಿ ಆ ನೀರನ್ನು ಮುಕ್ಕಳಿಸುವುದರಿಂದ ನೋವು ಕಡಿಮೆ ಮಾಡಿಕೊಳ್ಳಬಹುದು.
- ಸಾಮಾನ್ಯವಾಗಿ ಮಳೆಗಾಲದಲ್ಲಿ ದಾಹ ಕಡಿಮೆ ಇರುತ್ತದೆ. ಹೀಗಾಗಿ ಅನೇಕರು ನೀರು ಕುಡಿಯುವುದನ್ನು ಕಡಿಮೆ ಮಾಡಿರುತ್ತಾರೆ. ಇದರಿಂದ ಸಹ ಗಂಟಲು ಒಣಗುವುದು ಅಥವಾ ಗಂಟಲು ನೋವು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಬಿಸಿ ನೀರನ್ನು ಹೆಚ್ಚಾಗಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.
- ಜೇನುತುಪ್ಪ ಕೂಡ ಗಂಟಲು ನೋವಿಗೆ ಉತ್ತಮ ಮನೆಮದ್ದು. ಗಂಟಲು ನೋವಿನ ಸಮಸ್ಯೆ ಕಾಣಿಸಿಕೊಂಡ್ರೆ ಒಂದು ಚಮಚ ಜೇನುತುಪ್ಪಕ್ಕೆ ಕರಿಮೆಣಸಿನ ಪುಡಿ ಮಿಶ್ರ ಮಾಡಿ ಸೇವಿಸಿ. ಹೀಗೆ ಸೇವಿಸಿದ ತಕ್ಷಣ ನೀರು ಕುಡಿಯಬಾರದು.