- News18 Kannada
- Last Updated: April 4, 2021, 3:11 PM IST
- ಸೌಮ್ಯ ಕಳಸ News18 Media
Health Benefits: ನಮ್ಮ ಹಿರಿಯರು ಹೇಳಿದ ಅನೇಕ ವಿಚಾರಗಳನ್ನು ವಿಜ್ಞಾನ ಆಗಾಗ ಸತ್ಯ ಎಂದು ನಿರೂಪಿಸುತ್ತಿರುತ್ತದೆ. ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ವಿಜ್ಞಾನ ಹೇಳಿದ ನಂತರ ಅರೇ ಹೌದಾ, ನಮಗಿದು ಗೊತ್ತಿತ್ತಲಾ ಅಂತ ಅಂದುಕೊಳ್ಳುವವರಿಗೇನೂ ಕಡಿಮೆ ಇಲ್ಲ. ಈಗ ಇಂಥದ್ದೇ ಒಂದು ವಿಚಾರ ಬಾಳೆದಿಂಡಿನದ್ದಾಗಿದೆ. ದಕ್ಷಿಣ ಭಾರತದ ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸುವ ಬಾಳೆಯ ದಿಂಡು ಮಧುಮೇಹವನ್ನು ಹತೋಟಿಯಲ್ಲಿರಿಸಿ, ದೇಹತೂಕ ಇಳಿಸುವಲ್ಲಿ ಸಹಕಾರಿ ಎಂದು ವಿಜ್ಞಾನಲೋಕ ಘಂಟಾಘೋಷವಾಗಿ ಸಾರುತ್ತಿದೆ.
ಭಾರತದಲ್ಲಿ ವಾರ್ಷಿಕ 14.2 ಮಿಲಿಯನ್ ಟನ್ಗಳಷ್ಟು ಬಾಳೆಹಣ್ಣನ್ನು ಬೆಳೆಯುತ್ತದೆ. ಬಾಳೆಯ ಗಿಡದ ಪ್ರತೀ ಭಾಗವನ್ನೂ ಅಡುಗೆಯಲ್ಲಿ ಬಳಸಿ ನಮ್ಮ ಜನರಿಗೆ ಅಭ್ಯಾಸವಿದೆ. ಬಾಳೆಯ ಕಾಯಿ, ಹಣ್ಣು, ಹೂವು, ಎಲೆ ಕೊನೆಗೆ ಮರದ ಕಾಂಡ ಅಥವಾ ದಿಂಡನ್ನೂ ಬಳಸಲಾಗುತ್ತದೆ. ಈ ಎಲ್ಲವೂ ಆರೋಗ್ಯಕ್ಕೆ ಒಂದಲ್ಲಾ ಒಂದು ಬಗೆಯಲ್ಲಿ ಪ್ರಯೋಜನಕಾರಿಯೇ. ತಿಳಿದೋ ತಿಳಿಯದೆಯೋ ನಾವು ಬಾಳೆ ಗಿಡ ಎಲ್ಲಾ ಭಾಗಗಳನ್ನು ಯಥೇಚ್ಛವಾಗಿ ಬಳಸುತ್ತೇವೆ.
ಬಾಳೆಯ ಮರದಲ್ಲಿ ಒಂದು ಸಲ ಹಣ್ಣು ಬಿಟ್ಟರೆ ಅಲ್ಲಿಗೆ ಅದರ ಆಯಸ್ಸು ತೀರಿದಂತೆ. ಆಗ ಆ ಮರದ ಮೃದುವಾದ ಕಾಂಡವನ್ನು ತೆಗೆದು ಅದರ ಮೇಲಿನ ಪದರಗಳನ್ನು ಬಿಡಿಸಲಾಗುತ್ತದೆ. ಅದರ ನಟ್ಟನಡುವೆ ದೊರೆಯುವ ಕೆನೆಹಾಲಿನ ಬಣ್ಣದ ವಸ್ತುವೇ ಬಾಳೆಯ ದಿಂಡು. ಹೆಚ್ಚು ನಾರಿನಿಂದ ಕೂಡಿರುವ ಇದನ್ನು ಸಾಮಾನ್ಯವಾಗಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುವವರಿಗೆ ಚಿಕಿತ್ಸೆಯಲ್ಲಿ ನೀಡುತ್ತಾರೆ. ಅದರಲ್ಲೂ ಮೂತ್ರಪಿಂಡದಲ್ಲಿ ಕಲ್ಲು ಇರುವವರು ಬಾಳೆದಿಂಡಿನ ರಸವನ್ನು ಸೇವಿಸಿ ಅದರಿಂದ ಸಮಸ್ಯೆ ಪರಿಹಾರವಾಗಿರುವುದು ಸಾಮಾನ್ಯ ಸಂಗತಿ ಎನ್ನುವಷ್ಟು ಪರಿಚಿತ ವಿಚಾರ.
ಆದ್ರೆ ಬಾಳೆಯ ದಿಂಡು ದೇಹತೂಕವನ್ನು ಇಳಿಸುವಲ್ಲಿ ಬಹು ದೊಡ್ಡ ಪಾತ್ರ ವಹಿಸಬಲ್ಲದು. ಹೇರಳವಾಗಿ ಪಾಲಿಫೆನಲ್ಗಳಿರುವ ಇದರಲ್ಲಿ ಜೆಂಟಿಸಿಕ್ ಆಸಿಡ್, ಫೆರುಲಿಕ್ ಆಸಿಡ್ ಸೇರಿದಂತೆ ನಾನಾ ಬಗೆಯ antioxidant ಗಳು ಹೇರಳವಾಗಿವೆ. ಇವು ಜೀವಕೋಶಗಳಿಗೆ ಹೊಸಾ ಶಕ್ತಿ ನೀಡುತ್ತವೆ. ಅಷ್ಟೇ ಅಲ್ಲ, ಬಾಳೆಯ ದಿಂಡಿನಲ್ಲಿ ಹೆಚ್ಚು ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಯಲ್ಲಿ ಇದು ಬಹಳ ಸಹಕಾರಿಯಾಗಿದೆ.
ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಕಾಯ್ದಿರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುವ ಇದರ ಗುಣ ದೇಹದಲ್ಲಿ ಕೊಬ್ಬು ಶೇಖರಣೆಯಾಗದಂತೆ ಕೂಡಾ ತಡೆಯುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾದರೆ ದೇಹತೂಕ ಸಂಪೂರ್ಣವಾಗಿ ಹತೋಟಿಯಲ್ಲಿ ಇರುತ್ತದೆ. ಹಾಗಾಗಿ ಆಗಾಗ ಬಾಳೆದಿಂಡಿನ ನಾನಾ ಖಾದ್ಯಗಳನ್ನು ಸೇವಿಸುತ್ತಿದ್ರೆ ಅನಾರೋಗ್ಯ ಸಮಸ್ಯೆಗಳು ಹೆಚ್ಚು ಕಾಡೋದಿಲ್ಲ ಎನ್ನುತ್ತಾರೆ ವೈದ್ಯರು. ಸಾಧ್ಯವಿದ್ದವರು ಜ್ಯೂಸ್ ಮತ್ತು ಸಲಾಡ್ಗಳಲ್ಲೂ ಬಾಳೆದಿಂಡನ್ನು ಬಳಸಬಹುದು. ಇದರ ಪ್ರಯೋಜನಗಳನ್ನು ಅರಿತು ವಿಶ್ವದ ನಾನಾ ಮೂಲೆಗಳಲ್ಲಿ ಬಾಳೆದಿಂಡನ್ನು ಅದ್ಭುತ ವಸ್ತುವಿನಂತೆ ನೋಡುತ್ತಿದ್ದಾರೆ. ನಮಗೆಲ್ಲಾ ಸರಳವಾಗಿ ಸಿಗುವ ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬೇಕಷ್ಟೇ.