- News18 Kannada
- Last Updated: April 6, 2021, 6:00 AM IST
ಬಿಸಿಲ ಬೇಗೆಯಿಂದ ಬಳಲುತ್ತಿರುವವರು ಕಲ್ಲಂಗಡಿಯ ಮೊರೆ ಹೋಗುವುದು ಉತ್ತಮ. ಏಕೆಂದರೆ ಇದು ದೇಹವನ್ನು ತಂಪಾಗಿಡುವುದಲ್ಲದೆ, ಅನೇಕ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಕೂಡ ಪ್ರವೇಶಿಸಿದ್ದು, ಬೇಸಿಗೆ ಕಾಲದಲ್ಲಿ ಇತರೆ ಹಣ್ಣುಗಳ ಸೇವನೆಗಿಂತ ಇದರತ್ತ ಮುಖ ಮಾಡುವುದು ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದು. ಏಕೆಂದರೆ ಕಲ್ಲಂಗಡಿ ದೇಹದಲ್ಲಿನ ನೀರಿನ ಕೊರತೆಯನ್ನು ಪೂರೈಸುವುದಲ್ಲದೆ, ಇದು ಅನೇಕ ರೋಗಗಳನ್ನು ಗುಣಪಡಿಸುತ್ತದೆ. ಇದರ ಸೇವನೆಯಿಂದ ಒತ್ತಡ ಕೂಡ ಕಡಿಮೆಯಾಗುತ್ತದೆ. ಹಾಗೆಯೇ ಆಯಾಸ ನಿವಾರಣೆಯಾಗುತ್ತದೆ. ಅಲ್ಲದೆ ಇದು ಕೂದಲು ಮತ್ತು ಚರ್ಮಕ್ಕೂ ತುಂಬಾ ಒಳ್ಳೆಯದು. ಹಾಗಿದ್ರೆ ಕಲ್ಲಂಗಡಿ ತಿನ್ನುವುದರಿಂದ ಸಿಗುವ 7 ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯೋಣ.
- ಚರ್ಮದ ಆರೋಗ್ಯ: ಕಲ್ಲಂಗಡಿಯಲ್ಲಿ ಲೈಕೋಪೀನ್ ಕಂಡುಬರುತ್ತದೆ, ಇದು ಚರ್ಮದ ಹೊಳಪನ್ನು ಕಾಪಾಡುತ್ತದೆ.
- ಹೃದಯದ ಆರೋಗ್ಯ: ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಲು ಕಲ್ಲಂಗಡಿ ರಾಮಬಾಣವಾಗಿದೆ. ಇದು ಹೃದಯ ಸಂಬಂಧಿತ ಕಾಯಿಲೆಗಳನ್ನು ದೂರವಿರಿಸುತ್ತದೆ. ವಾಸ್ತವವಾಗಿ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗೆಯೇ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
- ಕಲ್ಲಂಗಡಿಯಲ್ಲಿ ಹೆಚ್ಚಿನ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳು ಇರುವುದರಿಂದ ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತಮವಾಗಿರಿಸುತ್ತದೆ. ಇದರಲ್ಲಿರುವ ವಿಟಮಿನ್ ಎ ಕೂಡ ಇದ್ದು, ಇದು ಕಣ್ಣುಗಳ ಆರೋಗ್ಯಕ್ಕೆ ಉತ್ತಮ.
- ಕಲ್ಲಂಗಡಿ ತಿನ್ನುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಕೋಪ-ತಾಪಗಳು ಕೂಡ ನಿಯಂತ್ರಣದಲ್ಲಿರುತ್ತದೆ. ಮುಖ್ಯವಾಗಿ ಇದರ ಸೇವನೆಯು ಮನಸ್ಸನ್ನು ಶಾಂತವಾಗಿರಿಸುತ್ತದೆ.
- ಕಲ್ಲಂಗಡಿ ಬೀಜಗಳು ಸಹ ತುಂಬಾ ಉಪಯುಕ್ತವಾಗಿವೆ. ಅದರ ಬೀಜಗಳನ್ನು ಪುಡಿಮಾಡಿ ಮುಖದ ಮೇಲೆ ಹಚ್ಚಿ, ಚರ್ಮವು ಹೊಳೆಯುವಂತೆ ಕಾಣುತ್ತದೆ. ಮುಖಕ್ಕೆ ಕಲ್ಲಂಗಡಿಯನ್ನು ಉಜ್ಜುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಹಾಗೆಯೇ ಬ್ಲ್ಯಾಕ್‌ಹೆಡ್‌ಗಳನ್ನು ಸಹ ತೆಗೆದುಹಾಕಬಹುದು. ಇದಲ್ಲದೆ, ಕಲ್ಲಂಗಡಿ ಬೀಜಗಳ ಲೇಪನವು ತಲೆನೋವಿಗೆ ಪರಿಹಾರವನ್ನು ನೀಡುತ್ತದೆ.
- ಕಲ್ಲಂಗಡಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಇದನ್ನು ತಿನ್ನುವುದರಿಂದ ಹೊಟ್ಟೆಯ ತೊಂದರೆಗಳು ನಿವಾರಣೆಯಾಗುತ್ತವೆ. ಅಲ್ಲದೆ, ರಕ್ತದ ಕೊರತೆಯಿದ್ದಾಗ, ಕಲ್ಲಂಗಡಿ ರಸವು ಪ್ರಯೋಜನಕಾರಿ.
- ಕಲ್ಲಂಗಡಿ ತಿನ್ನುವುದರಿಂದ ದೇಹದ ದಣಿವು ದೂರವಾಗುತ್ತದೆ. ಅಲ್ಲದೆ ದೇಹವನ್ನು ನಿರ್ಜಲೀಕರಣದಿಂದ ಪಾರು ಮಾಡಬಹುದು.