- News18 Kannada
- Last Updated: April 13, 2021, 8:13 PM IST
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಹಣಾಹಣಿಯಲ್ಲಿ ರನ್ ಮಳೆ ಸುರಿಯಿತು. ಮೊದಲ ಬ್ಯಾಟ್ ಮಾಡಿದ ಪಂಜಾಬ್ 221 ರನ್ಗಳ ಬಾರಿಸಿದರೆ, ಅದನ್ನು ಚೇಸ್ ಮಾಡಿದ ರಾಜಸ್ಥಾನ್ ರಾಯಲ್ಸ್ 217 ರನ್ಗಳಿಸಿತು. ಬೃಹತ್ ಮೊತ್ತದ ಗುರಿ ಪಡೆದ ರಾಜಸ್ಥಾನ್ ರಾಯಲ್ಸ್ಗೆ ನೆರವಾಗಿದ್ದು ಯುವ ನಾಯಕ ಸಂಜು ಸ್ಯಾಮ್ಸನ್.
ಇಡೀ ತಂಡದ ಜವಾಬ್ದಾರಿಯನ್ನು ಹೊತ್ತುಕೊಂಡ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟಕ್ಕೆ ಇಳಿದಿದ್ದರು. ಅಲ್ಲದೆ ಅಂತಿಮ ಓವರ್ನ ಕೊನೆಯ ಎಸೆತದವರೆಗೂ ಪಂದ್ಯವನ್ನು ಕೊಂಡೊಯ್ದರು. ಅಲ್ಲದೆ ಕೇವಲ 63 ಎಸೆತಗಳಲ್ಲಿ 119 ರನ್ ಬಾರಿಸಿ ಮಿಂಚಿದರು. ಅಂತಿಮವಾಗಿ ರೋಚಕ ಹೋರಾಟದಲ್ಲಿ ಕೆಎಲ್ ರಾಹುಲ್ ಪಡೆ 4 ರನ್ಗಳ ವಿಜಯ ಸಾಧಿಸಿತು. ಆದರೆ ನಾಯಕನಾಗಿ ಚೊಚ್ಚಲ ಬಾರಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಹಲವು ದಾಖಲೆಗಳನ್ನು ಬರೆದಿದ್ದು ವಿಶೇಷ.
ಈ ಬಾರಿಯ ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಸಂಜು ಸ್ಯಾಮ್ಸನ್, ರಾಜಸ್ಥಾನ್ ರಾಯಲ್ಸ್ ಪರ ನಾಯಕನಾಗಿ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇದಲ್ಲದೆ ಐಪಿಎಲ್‌ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ 2ನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ 5 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಸಂಜು ಸ್ಯಾಮ್ಸನ್ 3 ಶತಕಗಳೊಂದಿಗೆ 2ನೇ ಸ್ಥಾನಕ್ಕೇರಿದ್ದಾರೆ.
ಇನ್ನು ಐಪಿಎಲ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎಬಿ ಡಿವಿಲಿಯರ್ಸ್ ಅವರ ದಾಖಲೆಯನ್ನೂ 3 ಶತಕಗಳೊಂದಿಗೆ ಸ್ಯಾಮ್ಸನ್ ಸರಿಗಟ್ಟಿದ್ದರು. ಈ ಪಟ್ಟಿಯಲ್ಲಿ 6 ಶತಕ ಬಾರಿಸಿ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ (5) ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಡೇವಿಡ್ ವಾರ್ನರ್ (4) 3ನೇ ಸ್ಥಾನದಲ್ಲಿದ್ದರೆ, ಎಬಿಡಿ ಜೊತೆ ಸ್ಯಾಮ್ಸನ್ 4ನೇ ಸ್ಥಾನ ಅಲಂಕರಿಸಿದ್ದಾರೆ.
ಇದಲ್ಲದೆ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ 2 ಸಾವಿರ ರನ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಸ್ಯಾಮ್ಸನ್ ಪಾತ್ರರಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ 80 ಪಂದ್ಯಗಳಲ್ಲಿ ಯುವ ಬ್ಯಾಟ್ಸ್‌ಮನ್ 2026 ರನ್ ಗಳಿಸಿದ್ದಾರೆ. ಅಜಿಂಕ್ಯ ರಹಾನೆ ( 2810) ರಾಜಸ್ಥಾನ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.