- News18 Kannada
- Last Updated: April 11, 2021, 9:30 PM IST
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ರ ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಸೋಲುಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಪಂತ್ ಪಡೆ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ತಂಡದ ಯುವ ನಾಯಕ ಪಂತ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಬ್ಯಾಟಿಂಗ್ ಮಾಡಿದ ಸಿಎಸ್ಕೆ ತಂಡವು ಸುರೇಶ್ ರೈನಾ ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 188 ರನ್ ಕಲೆಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕರಾದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 13.3 ಓವರ್ನಲ್ಲಿ ಈ ಜೋಡಿ 138 ರನ್ ಬಾರಿಸಿತ್ತು. ಇನ್ನೇನು ಗೆಲುವಿನ ಅಂಚಿನಲ್ಲಿ ಪೃಥ್ವಿ ಶಾ 72 ರನ್ಗಳಿಸಿ ಔಟಾದರೆ, ಧವನ್ 85 ರನ್ ಬಾರಿಸಿ ನಿರ್ಗಮಿಸಿದರು. ಅಂತಿಮವಾಗಿ ಡೆಲ್ಲಿ ತಂಡವು 8 ಎಸೆತಗಳು ಬಾಕಿ ಇರುವಂತೆ ಗುರಿ ಮುಟ್ಟುವ ಮೂಲಕ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ನ್ನು ನಿಯಂತ್ರಿಸಲು ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಮಾಡಿದ ಉಪಾಯಗಳು ಫಲ ನೀಡಲಿಲ್ಲ. ಅದರಲ್ಲೂ ಸತತ ಬೌಲಿಂಗ್ನಲ್ಲಿ ಬದಲಾವಣೆ ತಂದರೂ ಯಶಸ್ಸು ಸಿಗಲಿಲ್ಲ. ಹೀಗೆ ಫೀಲ್ಡಿಂಗ್ ಬದಲಾವಣೆ ಮತ್ತು ಬೌಲಿಂಗ್ ಬದಲಾವಣೆಯೊಂದಿಗೆ ಹೆಚ್ಚಿನ ಸಮಯ ತೆಗೆದುಕೊಂಡರು. ಪರಿಣಾಮ ಧೋನಿಗೆ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
2021ರ ಇಂಡಿಯನ್ ಪ್ರಿಮಿಯರ್ ಲೀಗ್ನ ಹೊಸ ನೀತಿ ಸಂಹಿತೆ ಪ್ರಕಾರ 20 ಓವರ್‌ಗಳನ್ನು 90 ನಿಮಿಷಗಳಲ್ಲಿ ಮುಗಿಸಬೇಕು. ಅಂದರೆ ಇನಿಂಗ್ಸ್ವೊಂದಕ್ಕೆ 90 ನಿಮಿಷಗಳನ್ನು ನಿಗದಿ ಮಾಡಲಾಗಿದೆ. ಅದರಂತೆ 90 ನಿಮಿಷಗಳಲ್ಲಿ 20 ಓವರ್ಸ್ ಮುಗಿಯಬೇಕು. ಈ ಹಿಂದೆ 20ನೇ ಓವರ್ನ್ನು 90ನೇ ನಿಮಿಷದಿಂದ ಆರಂಭಿಸಲು ಅವಕಾಶವಿತ್ತು. ಆದರೀಗ ಒಂದು ಗಂಟೆ 30 ನಿಮಿಷಗಳ ಒಳಗೆ ಮೊದಲ ಇನಿಂಗ್ಸ್ ಬೌಲಿಂಗ್ ಮುಕ್ತಾಯವಾಗಬೇಕು.
ಹಾಗೆಯೇ ಟೈಮ್-ಔಟ್ಗಳಿಗಾಗಿ ತೆಗೆದುಕೊಂಡ ಸಮಯವನ್ನು ಹೊರತುಪಡಿಸಿ ಮೊದಲ ಒಂದು ಗಂಟೆಯೊಳಗೆ 14.11 ಓವರ್‌ಗಳನ್ನು ಬೌಲ್ ಮಾಡಲೇಬೇಕು. ಹೊಸ ನಿಯಮದಂತೆ ಯಾವುದೇ ಆಡಚಣೆ ಉಂಟಾಗದ ಪಂದ್ಯದ ಒಂದು ಇನಿಂಗ್ಸ್ 90 ನಿಮಿಷಗಳಲ್ಲಿ ಮುಗಿಸಬೇಕು. ಇಲ್ಲಿ 85 ನಿಮಿಷಗಳನ್ನು ಆಟಕ್ಕೆ ನಿಗದಿಪಡಿಸಲಾಗಿದ್ದರೆ, 5 ನಿಮಿಷಗಳ ಎರಡು ಟೈ ಔಟ್ ಕೂಡ ನೀಡಲಾಗುತ್ತದೆ.
ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೆಚ್ಚಿನ ಸಮಯ ತೆಗೆದುಕೊಂಡಿದ್ದು, ಹೀಗಾಗಿ ಸಿಎಸ್ಕೆ ತಂಡ ನಾಯಕ ಮಹೇಂದ್ರ ಸಿಂಗ್ ಧೋನಿಗೆ 12 ಲಕ್ಷ ರೂ ದಂಡ ವಿಧಿಸಲಾಗಿದೆ. ಒಟ್ಟಿನಲ್ಲಿ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿರುವ ಸಿಎಸ್ಕೆ ತಂಡದ ನಾಯಕನಿಗೆ ಸೋಲಿನ ನೋವಿನ ಮೇಲೆ ದಂಡದ ಬರೆ ಎಳೆದಂತಾಗಿದೆ.