- News18 Kannada
- Last Updated: April 13, 2021, 7:28 PM IST
ದಿನೇ ದಿನೇ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಎಲ್ಲೆಡೆ ಸಾಮಾಜಿಕ ಅಂತರ ಮತ್ತು ಮಾಸ್ಕ್‌ನ ಮಹತ್ವವನ್ನು ಪರಿಣಾಮಕಾರಿಯಾಗಿ ಮನದಟ್ಟು ಮಾಡ್ತಿದೆ. ಈ ವಿಚಾರದಲ್ಲಿ ಬಾಲಿವುಡ್ ಮಂದಿ ಕೂಡ ಹಿಂದೆ ಬಿದ್ದಿಲ್ಲ. ಜಗತ್ತಿನ ತುಂಬಾ ಆತಂಕವೇ ಮನೆ ಮಾಡಿರುವ ಈ ಸಂದರ್ಭದಲ್ಲಿ ಮನರಂಜನೆಯ ಮೂಲಕ ನಿರಾಳತೆ ಸಾಧಿಸುವ ಪ್ರಯತ್ನದಲ್ಲಿ ಕಲಾಕ್ಷೇತ್ರ ತೊಡಗಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್‌ಗಳು ಪ್ರಾರಂಭವಾಗಿದೆ. ಬಾಲಿವುಡ್‌ನ ಬಹುತೇಕ ಶೂಟಿಂಗ್‌ಗಳು ಆರಂಭವಾಗಿದ್ದು, ನಟ ನಟಿಯರು ತಪ್ಪದೇ ಮಾಸ್ಕ್ ಧರಿಸಿ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಇದರ ಜೊತೆಗೆ ಮಾಸ್ಕ್ ಬಗ್ಗೆ ಫೋಟೋ ಮತ್ತು ಶಾರ್ಟ್ ವಿಡಿಯೋ ಮೂಲಕ ಜನರಲ್ಲಿ ಅರಿವು ಕೂಡ ಮೂಡಿಸುತ್ತಿದ್ದಾರೆ.
ಈಗ ಬಾಲಿವುಡ್‌ನ ಸ್ಟೂಡೆಂಟ್ ಆಫ್ ದಿ ಇಯರ್ ವರುಣ್ ಧವನ್ ಮತ್ತೊಮ್ಮೆ ಬಾಲಿವುಡ್‌ನ ಬೆಸ್ಟ್ ಸ್ಟೂಡೆಂಟ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ವರುಣ್ ದವನ್ ಸದ್ಯ ಶೂಟಿಂಗ್ ನಲ್ಲಿ ಬ್ಯುಸಿ ಇದ್ದು, ಅರುಣಾಚಲ ಪ್ರದೇಶದಲ್ಲಿದ್ದಾರೆ. ಈ ನಡುವೆ ಅಭಿಮಾನಿಗಳು ಸೆಲ್ಫಿಗಾಗಿ ನಟ, ನಟಿಯರನ್ನು ಅಪ್ರೋಚ್ ಮಾಡುವುದು ಮುಂದುವರೆದಿದೆ. ಇದೊಂದು ರೀತಿ ಸಂಕಷ್ಟದ ಸಮಯವಾಗಿದ್ದು, ಅಭಿಮಾನಿಗಳನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿದೆ. ಕೆಲವರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಪಾಲಿಸಿದ್ರೆ, ಇನ್ನೂ ಕೆಲವರು ಮಾಸ್ಕ್ ಮರೆತು ಕಲಾವಿದರನ್ನು ಪೇಚಾಟಕ್ಕೆ ಸಿಲುಕಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕೂಡ ಮಾಸ್ಕ್ ಧರಿಸಬೇಕು. ಅದು ನಮ್ಮೆಲ್ಲರ ಕರ್ತವ್ಯ ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ವಿಡಿಯೊವೊಂದು ಎಲ್ಲಾ ಕಡೆ ವೈರಲ್ ಆಗ್ತಿದೆ.
ಸದ್ಯ ಭೇಡಿಯಾ ಸಿನಿಮಾದ ಶೂಟಿಂಗ್‌ನಲ್ಲಿರುವ ವರುಣ್ ಧವನ್ ತಮ್ಮನ್ನು ಸುತ್ತುವರೆದಿದ್ದ ಅಭಿಮಾನಿಗಳ ಜೊತೆಗೆ ಒಂದು ವಿಡಿಯೋ ಮಾಡಿದ್ದಾರೆ. ಅದರಲ್ಲಿ ಅಭಿಮಾನಿಯೊಬ್ಬರು 'ವರುಣ್ ನೀವು ನಿಮ್ಮ ಮಾಸ್ಕ್ ತೆಗೆದು ಎಲ್ಲರನ್ನೂ ಅಪ್ಪಿಕೊಳ್ಳಬೇಕು. ಜೊತೆಗೆ ಎಲ್ಲರ ಕೈ ಕುಲಕಬೇಕು' ಎಂದು ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಉತ್ತರಿಸಿದ ವರುಣ್, 'ನಾನು ಹಾಗೆಲ್ಲಾ ಮಾಸ್ಕ್ ತೆಗೆಯುವುದಿಲ್ಲ. ನೀವು ಕೂಡ ಮಾಸ್ಕ್ ಧರಿಸಿ. ಮಾಸ್ಕ್ ತೆಗೆಯಬೇಡಿ. ನಾವೆಲ್ಲರೂ ಸರ್ಕಾರದ ನಿಯಮಗಳನ್ನು ಪಾಲಿಸಬೇಕು' ಎಂದಿದ್ದಾರೆ.
ಸೆಲೆಬ್ರಿಟಿಗಳು ಮಾಸ್ಕ್ ಧರಿಸಿ ಎಂದು ಎಲ್ಲರಲ್ಲೂ ಮನವಿ ಮಾಡುತ್ತಿರುವುದು ಇದು ಮೊದಲೇನೆಲ್ಲ. ಈ ಹಿಂದೆ ನಟಿ ಕರೀನಾ ಕಪೂರ್ ಕೂಡ ಮಾಸ್ಕ್ ಧರಿಸಿಕೊಂಡು ಫೋಟೋವನ್ನು ಅಪ್ಲೋಡ್ ಮಾಡಿದ್ದರು. 'ಪ್ರಚಾರ ಅಲ್ಲ, ಜಸ್ಟ್ ಮಾಸ್ಕ್ ಹಾಕಿಕೊಳ್ಳಿ' ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಸೋನಂ ಕಪೂರ್ ಕೂಡ ಮಾಸ್ಕ್ ಧರಿಸಿದ್ದ ತಮ್ಮ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪ್ರಿಯಾಂಕ ಚೋಪ್ರಾ ತಮ್ಮ ನಾಯಿ ಮರಿ ಜೊತೆಗೆ ಮಾಸ್ಕ್ ಧರಿಸಿದ್ದ ಫೋಟೋ ಹಂಚಿಕೊಂಡು ಜನರಿಗೆ ಮಾಸ್ಕ್‌ನ ಪ್ರಾಮುಖ್ಯತೆ ಬಗ್ಗೆ ಪ್ರಭಾವ ಬೀರಿದ್ದರು.
ಇನ್ನು ವರುಣ್ ಧವನ್ ಜನವರಿ 24 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, 10 ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿದ್ದ ಫ್ಯಾಷನ್ ಡಿಸೈನರ್ ನತಾಶ ದಲಾಲ್ ಅವರನ್ನು ಮದುವೆಯಾದರು.
ಸದ್ಯ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುವ ವರುಣ್, ಅವರ ತಂದೆ ಡೇವಿಡ್ ಧವನ್ ಅವರ ಕೂಲಿ ನಂ1 ಸಿನಿಮಾದಲ್ಲಿ ಸಾರಾ ಅಲಿ ಖಾನ್ ಅವರೊಂದಿಗೆ ಒಟ್ಟಿಗೆ ಅಭಿನಯಿಸಿದ್ದಾರೆ. ಈ ಸಿನಿಮಾ 1995 ರಲ್ಲಿ ಹಿರಿಯ ನಟ ಗೋವಿಂದ ಅವರ ಸಿನಿಮಾದ ಅಡಾಪ್ಷನ್ ಆಗಿತ್ತು.
ವರುಣ್ ರಾಜ್ ಮೆಹ್ತಾ ಅವರ ರೋಮ್ಯಾಂಟಿಕ್ ಕಾಮಿಡಿ ಜಗ್ ಜಗ್ ಜೀಯೋ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಕಿಯಾರ ಅದ್ವಾನಿ, ಅನಿಲ್ ಕಪೂರ್, ನೀತು ಸಿಂಗ್ ಮತ್ತು ಪ್ರಜಾಕ್ತ ಕೋಲಿ ಅವರೊಟ್ಟಿಗೆ ಅಭಿನಯಿಸುತ್ತಿದ್ದಾರೆ. ಈ ಸಿನಿಮಾವನ್ನು ಕರಣ್ ಜೋಹರ್ ನಿರ್ಮಿಸುತ್ತಿದ್ದಾರೆ. ಸದ್ಯ ವರುಣ್ ದಿನೇಶ್ ವಿಜನ್ ಅವರ ಕಾಮಿಕ್ ಹಾರರ್ ಸಿನಿಮಾ ಭೇಡಿಯಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೃತಿ ಸನನ್ ಈ ಸಿನಿಮಾದಲ್ಲಿ ವರುಣ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಎರಡು ಸಿನಿಮಾಗಳಲ್ಲದೇ, ಸಾಜೀದ್ ನಾದಿಯಾದ್ವಾಲ ಅವರ ಆಕ್ಷನ್ ಥ್ರಿಲ್ಲರ್ ಸಂಕಿ ಮತ್ತು ರಾಘವನ್ ನಿರ್ದೇಶನದ ಏಕೀಸ್ ಸಿನಿಮಾಗಳು ಅವರ ಕೈಯಲ್ಲಿವೆ.