ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

Covid Effect: ಉಪ್ಪಿ ಹೇಳಿದ ಕೊರೊನಾ ಪಾಠ, ನಾನೂ ಅನುಭವಿಸಿದ್ದೇನೆ ಎಂದರು ಸಾಧುಕೋಕಿಲ

ಕೊರೊನಾ ಭಯಾನಕತೆ ಜನ ಅಂದುಕೊಂಡಷ್ಟು ಸಲೀಸಾಗಿಲ್ಲ, ನಿಜಕ್ಕೂ ಮಾಧ್ಯಮಗಳಲ್ಲಿ ತೋರಿಸುವಷ್ಟೇ ಭೀಕರವಾಗಿದೆ. ಎಲ್ಲರೂ ಇದನ್ನು ಅರಿತು ಜಾಗರೂಕತೆಯಿಂದ ಇರಬೇಕು…ಹೀಗಂದಿದ್ದು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಹಾಸ್ಯನಟ ಸಾಧುಕೋಕಿಲ.

ಬೆಂಗಳೂರು (ಏಪ್ರಿಲ್ 19): ಕೋವಿಡ್ ಎರಡನೇ ಅಲೆಯ ಹೊಡೆತಕ್ಕೆ ಇಡೀ ಜಗತ್ತೇ ತತ್ತರಿಸುತ್ತಿದೆ. ಕರ್ನಾಟಕ ರಾಜ್ಯದಲ್ಲೂ ಪರಿಸ್ಥಿತಿ ಭಿನ್ನವಾಗೇನಿಲ್ಲ. ಜನರಲ್ಲಿ ಅರಿವು ಮೂಡಿಸುವ ಕೆಲಸ ಅದೆಷ್ಟೇ ಮಾಡಿದ್ರೂ ಕಡಿಮೆಯೇ ಎನಿಸುವಂತಿದೆ ಈಗಿನ ಪರಿಸ್ಥಿತಿ. ಕೊರೊನಾ ಭಯಾನಕತೆ ಜನ ಅಂದುಕೊಂಡಷ್ಟು ಸಲೀಸಾಗಿಲ್ಲ, ನಿಜಕ್ಕೂ ಮಾಧ್ಯಮಗಳಲ್ಲಿ ತೋರಿಸುವಷ್ಟೇ ಭೀಕರವಾಗಿದೆ. ಎಲ್ಲರೂ ಇದನ್ನು ಅರಿತು ಜಾಗರೂಕತೆಯಿಂದ ಇರಬೇಕು…ಹೀಗಂದಿದ್ದು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಹಾಸ್ಯನಟ ಸಾಧುಕೋಕಿಲ.


“ ಜನರೇ ಎಚ್ಚೆತ್ತುಕೊಳ್ಳಬೇಕು.. ಹಬ್ಬ ಹರಿದಿನಗಳನ್ನು ಆಚರಿಸೋದನ್ನೆಲ್ಲಾ ಬಿಟ್ಟುಬಿಡಿ. ನಾವು ನಮ್ಮ ಮನೆಗಳಲ್ಲಿ ಸುಮ್ಮನೆ ಇದ್ದುಬಿಟ್ರೆ ಅದೇ ಒಳ್ಳೆಯದು” ಎಂದರು ಸಾಧುಕೋಕಿಲಾ. ತಾವೇ ಖುದ್ದು ಈ ಎಲ್ಲಾ ವಿಚಾರಗಳನ್ನು ಅನುಭವಿಸಿದ್ದನ್ನು ಹೇಳಿಕೊಂಡರು. ಸಾಧುಕೋಕಿಲಾರ ಅಣ್ಣನ ಮಗನಿಗೆ ಕೊರೊನಾ ಸೋಂಕು ತಗುಲಿತ್ತಂತೆ. ಅವರಿಗೆ ಉಸಿರಾಟದ ತೊಂದರೆ ಇದ್ದಿದ್ರಿಂದ ಆಕ್ಸಿಜನ್ ನೀಡಬೇಕಾಯ್ತು. ಆದ್ರೆ ಎಲ್ಲೆಡೆ ಆಕ್ಸಿಜನ್ ಶಾರ್ಟೇಜ್ ಎಂದರು. ನಾನೊಬ್ಬ ಖ್ಯಾತ ವ್ಯಕ್ತಿಯಾಗಿಯೂ ಆಕ್ಸಿಜನ್ ಹೊಂದಿಸೋಕೆ ಒಂದು ಇಡೀ ದಿನ ಒದ್ದಾಡಿದ್ದೇನೆ, ಅಂದ್ಮೇಲೆ ಜನ ಸಾಮಾನ್ಯರ ಪಾಡೇನು ಎಂದರು ಸಾಧುಕೋಕಿಲ. ಅವರ ದನಿಯಲ್ಲಿ ಆತಂಕ ಸ್ಪಷ್ಟವಿತ್ತು.


ದಯವಿಟ್ಟು ಯಾರೂ ನಿರ್ಲಕ್ಷ್ಯ ಮಾಡಬೇಡಿ. ಟಿವಿ ಚಾನಲ್ ನಲ್ಲಿ ಬರೋ ಸುದ್ದಿಯನ್ನ ನಿರ್ಲಕ್ಷ್ಯ ಮಾಡಬೇಡಿ.. ಕರೋನಾದಿಂದ ಸಾಕಷ್ಟು ತೊಂದರೆ ಆಗುತ್ತಿದೆ, ನಾವು ಮೊದಲು ಹುಷಾರಾಗಿರೋದನ್ನ ಕಲಿಯಬೇಕು ಎಂದು ಜನರಲ್ಲಿ ಸಾಧು ಮನವಿ ಮಾಡಿದ್ರು.


ಇನ್ನು ಇದೇ ವಿಚಾರವಾಗಿ ರಿಯಲ್ ಸ್ಟಾರ್ ಉಪೇಂದ್ರ ಮಾತನಾಡಿ, “ನಾನು ಮೊದಲ ದಿನದಿಂದಲೇ ಹೇಳುತ್ತಿದ್ದೆ..ಈಗ ಜನಗಳಿಗೆ ಅರ್ಥ ಆಗುತ್ತಿದೆ..ಬ್ಯುಸಿನೆಸ್ ರಾಜಕಾರಣದಿಂದ ಇಷ್ಟೆಲ್ಲಾ ಆಗುತ್ತಿದೆ. ಕೊರೋನಾ ಇಡೀ ಪ್ರಪಂಚಕ್ಕೆ ಬಂದಿದೆ, ಇದನ್ನ ತಡೆಯೋಕೆ ಹೆಲ್ತ್ ಸಿಸ್ಟಮ್ ಸರಿ ಇರಬೇಕು. ಶಿಕ್ಷಣ ಮತ್ತು ಆರೋಗ್ಯ ಚೆನ್ನಾಗಿದ್ದರೆ ಇಡೀ ದೇಶ ಚನ್ನಾಗಿರುತ್ತೆ. ಎಲ್ಲರೂ ಮನಸ್ಸನ್ನು ಗಟ್ಟಿ ಇಟ್ಟುಕೊಳ್ಳಿ, ಪಾಸಿಟಿವ್ ಆಗಿರಿ.. ಭಯ ಪಡಬೇಡಿ.. ಎಲ್ಲೆಂದರಲ್ಲಿ ಓಡಾಡಬೇಡಿ. ರಾಜಕಾರಣಿಗಳು ಸಭೆ ಸಮಾರಂಭ ಮಾಡುತ್ತಿದ್ದಾರೆ. ಅದನ್ನ ನೋಡಿ ಜನ ತಲೆ ಕೆಡಿಸಿಕೊಳ್ಳಲ್ಲಾ.. ದಯವಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಹುಷಾರಾಗಿರಿ” ಎಂದರು.

ಚಿತ್ರವೊಂದರ ಸಮಾರಂಭದಲ್ಲಿ ಭಾಗವಹಿಸಿದ್ದ ಈ ನಟರಿಬ್ಬರು ಕೋವಿಡ್ ಬಗ್ಗೆ ಜನರಲ್ಲಿ ಅರಿವು ಹೆಚ್ಚಬೇಕಿದೆ, ಇಲ್ಲದಿದ್ದರೆ ಪರಿಸ್ಥಿತಿ ವಿಪರೀತವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

Published by: Soumya KN
First published: April 19, 2021, 1:14 PM IST