ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

Actor Vivek Death: ಹೃದಯಾಘಾತಕ್ಕೀಡಾಗಿದ್ದ ತಮಿಳಿನ ಹಾಸ್ಯ ನಟ ವಿವೇಕ್ ನಿಧನ

Vivek Passes Away: 59 ವರ್ಷದ ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್​ಗೆ ನಿನ್ನೆ ಹೃದಯ ನಾಳದಲ್ಲಿ ತೊಂದರೆ ಉಂಟಾಗಿದ್ದರಿಂದ ಐಸಿಯುಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ 4.45ಕ್ಕೆ ವಿವೇಕ್ ಸಾವನ್ನಪ್ಪಿದ್ದಾರೆ.

ಚೆನ್ನೈ (ಏ. 17): ತೀವ್ರ ಹೃದಯಾಘಾತದಿಂದ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. 59 ವರ್ಷದ ವಿವೇಕ್​ಗೆ ನಿನ್ನೆ ಹೃದಯ ನಾಳದಲ್ಲಿ ತೊಂದರೆ ಉಂಟಾಗಿದ್ದರಿಂದ ಐಸಿಯುಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ 4.45ಕ್ಕೆ ವಿವೇಕ್ ಸಾವನ್ನಪ್ಪಿದ್ದಾರೆ. ಸುಮಾರು 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತಮಿಳು ನಟ ವಿವೇಕ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಲಾಗಿತ್ತು.


ವಿವೇಕ್ ಅವರ ಹೃದಯನಾಳದಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೃದಯಾಘಾತ ಉಂಟಾದ್ದರಿಂದ ನಿನ್ನೆ ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಕೋವಿಡ್ ವ್ಯಾಕ್ಸಿನೇಷನ್ ತೆಗೆದುಕೊಂಡಿದ್ದರಿಂದ ಅದರ ಅಡ್ಡ ಪರಿಣಾಮದಿಂದ ಹೃದಯಾಘಾತ ಉಂಟಾಗಿರಬಹುದು ಎಂಬ ಚರ್ಚೆಗಳೂ ನಡೆದಿದ್ದವು. ಆದರೆ, ವೈದ್ಯರು ಈ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು. ವೆಂಟ್ರಿಕ್ಯುಲರ್ ಫೈಬ್ರಿಲೇಷನ್ ಎಂಬ ಹೃದಯ ಸಂಬಂಧಿ ತೊಂದರೆಗೀಡಾಗಿದ್ದ ನಟ ವಿವೇಕ್ ಅವರಿಗೆ ಮೆದುಳಿಗೆ ರಕ್ತ ಪೂರೈಕೆ ಕಡಿಮೆಯಾಗಿದೆ ಎಂದು ನಿನ್ನೆ ಎಸ್​ಐಎಂಎಸ್ ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.


ತಮಿಳು ಚಿತ್ರರಂಗದಲ್ಲಿ ಚಿನ್ನ ಕಲೈವಾನರ್ ಎಂದೇ ಖ್ಯಾತಿ ಗಳಿಸಿರುವ ವಿವೇಕ್ ರಜನಿಕಾಂತ್, ಅಜಿತ್ ಸೇರಿದಂತೆ ಬಹುತೇಕ ಎಲ್ಲ ಖ್ಯಾತ ನಟರ ಜೊತೆ ನಟಿಸಿದ್ದಾರೆ. ತಮ್ಮ ನೇರ ನುಡಿಯಿಂದ ಪ್ರಸಿದ್ಧರಾಗಿದ್ದ ವಿವೇಕ್ ಪರಿಸರ ಸಂರಕ್ಷಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಅವರ ಚಿಂತನೆಗಳು ಮತ್ತು ಜೀವನಶೈಲಿಯಿಂದ ನಟ ವಿವೇಕ್ ಬಹಳ ಪ್ರಭಾವಿತರಾಗಿದ್ದರು.

Published by: Sushma Chakre
First published: April 17, 2021, 8:04 AM IST