- News18 Kannada
- Last Updated: April 17, 2021, 8:06 AM IST
ಧಾರವಾಡ : ಒಂದೇ ದಿನದಲ್ಲಿ 30 ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಕಂಡು ಬಂದಿವೆ. ಕೋವಿಡ್ ವೈರಸ್ ನ ಗಂಭೀರತೆಯನ್ನು ಅರ್ಥೈಸಿಕೊಳ್ಳದಿರುವ ಕಾರಣ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿವೆ.
ವಿದ್ಯಾರ್ಥಿಗಳಲ್ಲಿಯೇ ಹೆಚ್ಚು ಕೋವಿಡ್ ಸೋಂಕು ಕಂಡು ಬರುತ್ತಿರುವ ಧಾರವಾಡದ ಸಪ್ತಾಪೂರ ಪ್ರದೇಶದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಗೌರಿಶಂಕರ ಮೆಟ್ರಿಕ್ ನಂತರದ ವಸತಿನಿಲಯದಲ್ಲಿ 10 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ವಸತಿನಿಲಯ 1 ಮತ್ತು 2 ರಲ್ಲಿ ಇರುವ ಸುಮಾರು 530 ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯ ಸಹಕಾರದಲ್ಲಿ ಆರ್‍ಟಿಪಿಸಿಆರ್ ಕೋವಿಡ್ ಟೆಸ್ಟ್ ಮಾಡಿಸಿ ಸೋಂಕು ದೃಢಪಟ್ಟಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕರ್ನಾಟಕ ಕಾಲೇಜಿನ ಕಾವೇರಿ ವಿದ್ಯಾರ್ಥಿನಿಲಯದಲ್ಲಿನ ವಿದ್ಯಾರ್ಥಿನಿಯರಿಗೆ ಇತ್ತೀಚೆಗೆ ಆರೋಗ್ಯ ಇಲಾಖೆಯಿಂದ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ 7 ವಿದ್ಯಾರ್ಥಿನಿಯರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ವರದಿ ಬರುವ ಪೂರ್ವದಲ್ಲಿ ವಿದ್ಯಾರ್ಥಿನಿಯರು ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದು ಸಂಬಂಧಿಸಿದವರಿಗೆ ವರದಿ ಮತ್ತು ಮಾಹಿತಿ ನೀಡಲಾಗಿದೆ. ಉಳಿದ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ.
ಹುಬ್ಬಳ್ಳಿಯ ಬಿವಿಬಿ ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿಗಳಿರುವ ಸಹ್ಯಾದ್ರಿ ವಿದ್ಯಾರ್ಥಿ ವಸತಿ ನಿಲಯದ 13 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಅವರನ್ನು ಪ್ರತ್ಯೇಕಗೊಳಿಸಿ, ಅಗತ್ಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಕೋವಿಡ್ 2ನೇ ಅಲೆಯು ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಮದ್ಯವಯಸ್ಕರಿಗೆ ಹೆಚ್ಚು ಕಾಣಿಸುತ್ತಿದ್ದು, ಉದಾಸೀನತೆ ಹಾಗೂ ನಿರ್ಲಕ್ಷ್ಯ ತೋರದೇ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಮತ್ತು ಕನಿಷ್ಠ ಸಾಮಾಜಿಕ ಅಂತರ ಕಾಪಾಡಬೇಕು. ಆಗಾಗ ಸೋಪು ಅಥವಾ ಸ್ಯಾನಿಟೈಸರ್‍ನಿಂದ ಕೈ ತೊಳೆಯಬೇಕು. ಇವುಗಳ ಪಾಲನೆಯಿಂದ ಮಾತ್ರ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಬಹುದಾಗಿದ್ದು, ಕೋವಿಡ್ ವೈರಸ್‍ನಿಂದ ಸುರಕ್ಷಿತವಾಗಿ ಇರಬಹುದಾಗಿದೆ.
ಜಿಲ್ಲಾಡಳಿತವು ಸರ್ಕಾರದ ಮಾರ್ಗಸೂಚಿಗಳನ್ನು ಪ್ರಚುರಪಡಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ನಿಯಮ ಪಾಲಿಸದವರಿಗೆ ದಂಡ ವಿಧಿಸುವ ಹಾಗೂ ಸ್ಥಳದಲ್ಲಿಯೇ ಕೋವಿಡ್ ಟೆಸ್ಟ್ ಮಾಡುವ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇದೆಲ್ಲಕ್ಕಿಂತ ಮುಖ್ಯ ಸಾರ್ವಜನಿಕರು ಕೋವಿಡ್ ಸಾಂಕ್ರಾಮಿಕ ರೋಗದ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಸರ್ಕಾರ ನೀಡಿರುವ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕೆಂದು ತಿಳಿಸಿರುವ ಅವರು ಇದೇ ರೀತಿ ನಿರ್ಲಕ್ಷ್ಯ ಮುಂದುವರೆಸಿದರೆ ಸರ್ಕಾರದ ನಿರ್ದೇಶನದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಎಚ್ಚರಿಸಿದ್ದಾರೆ.