- News18
- Last Updated: April 21, 2021, 2:29 PM IST
ಮುಂಬೈ(ಏ. 21): ಆಕ್ಸ್ಫರ್ಡ್ ಯೂನಿವರ್ಸಿಟಿ ಮತ್ತು ಆಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ತಯಾರಿಸುತ್ತಿರುವ ಸೀರಂ ಇನ್ಸ್ಟಿಟ್ಯೂಟ್ ಸಂಸ್ಥೆ ತನ್ನ ವ್ಯಾಕ್ಸಿನ್ ಮಾರಾಟ ದರವನ್ನು ಇಂದು ಪರಿಷ್ಕರಿಸಿದೆ. ಖಾಸಗಿ ಮಾರುಕಟ್ಟೆಯಲ್ಲಿ ಲಸಿಕೆಯನ್ನ ಕೊಳ್ಳಲು ಹಾಗೂ ರಾಜ್ಯ ಸರ್ಕಾರಗಳು ಮುಕ್ತವಾಗಿ ಲಸಿಕೆ ಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಸೀರಂ ಸಂಸ್ಥೆ ಹೊಸ ದರ ಪ್ರಕಟಿಸಿದೆ. ಅದರಂತೆ, ರಾಜ್ಯ ಸರ್ಕಾರಗಳಿಗೆ ಕೋವಿಶೀಲ್ಡ್ ಲಸಿಕೆಯನ್ನ ಒಂದು ಡೋಸ್ಗೆ 400 ರೂಪಾಯಿಯಂತೆ ದರ ನಿಗದಿ ಮಾಡಿದೆ. ಹಾಗೆಯೇ, ಖಾಸಗಿ ಆಸ್ಪತ್ರೆಗಳಿಗೆ ಈ ಲಸಿಕೆ ಒಂದು ಡೋಸ್ಗೆ 600 ರೂ ದರಕ್ಕೆ ನೀಡಲು ಸಂಸ್ಥೆ ನಿರ್ಧರಿಸಿದೆ. ಇದರೊಂಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಇಚ್ಛಿಸುವ ಜನರು ತುಸು ದುಬಾರಿ ಬೆಲೆ ತೆರಬೇಕಾಗಬಹುದು.
ಇದೇ ವೇಳೆ, ದೇಶದಲ್ಲಿ ಲಸಿಕೆ ಪ್ರಮಾಣದಲ್ಲಿ ಕೊರತೆ ಆಗಿರುವ ಹಿನ್ನೆಲೆಯಲ್ಲಿ, ತನ್ನ ಲಸಿಕೆ ಉತ್ಪಾದನೆಯ ಪ್ರಮಾಣ ಹೆಚ್ಚಿಸುವುದಾಗಿ ಸೀರಂ ಇನ್ಸ್ಟಿಟ್ಯೂಟ್ (ಎಸ್ಐಐ) ಹೇಳಿದೆ. ಮುಂದಿನ ಎರಡು ತಿಂಗಳಲ್ಲಿ ಉತ್ಪಾದನೆಯಾಗುವ ಕೋವಿಶೀಲ್ಡ್ ಲಸಿಕೆಯಲ್ಲಿ ಅರ್ಧ ಭಾಗವನ್ನ ಕೇಂದ್ರ ಸರ್ಕಾರಕ್ಕೆ ಒದಗಿಸಲಾಗುತ್ತದೆ. ಉಳಿದರ್ಧವನ್ನು ರಾಜ್ಯ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಮೀಸಲಿಡುವುದಾಗಿ ಸೀರಂ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಕೋವಿಶೀಲ್ಡ್ ಲಸಿಕೆ ದುಬಾರಿ ಆಗಿದೆ ಎಂಬ ವಾದವನ್ನು ಇದೇ ಸಂದರ್ಭದಲ್ಲಿ ಸೀರಂ ಸಂಸ್ಥೆ ತಳ್ಳಿ ಹಾಕಿದೆ. ವಿದೇಶೀ ಲಸಿಕೆಗಳು ಒಂದು ಡೋಸ್ಗೆ 750 ರೂನಿಂದ 1,500 ರೂ ಬೆಲೆ ಹೊಂದಿವೆ. ಅದಕ್ಕೆ ಹೋಲಿಸಿದರೆ ಕೋವಿಶೀಲ್ಡ್ ಲಸಿಕೆ ಅಗ್ಗದ ಬೆಲೆ ಹೊಂದಿದೆ ಎಂದು ಸೀರಂ ಇನ್ಸ್ಟಿಟ್ಯೂಟ್ ತನ್ನ ಲಸಿಕೆಯ ಬೆಲೆಯನ್ನು ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ: ವೈದ್ಯೆಗೆ ಸಿಕ್ಕಿತ್ತು ಸಾವಿನ ಮುನ್ಸೂಚನೆ; ಫೇಸ್ಬುಕ್ನಲ್ಲಿ ವಿದಾಯದ ಮೆಸೇಜ್ ಹಾಕಿದ ಮರುದಿನವೇ ಸಾವು
ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ್ ಬಯೋಟೆಕ್ ಮತ್ತು ಸೀರಂ ಸಂಸ್ಥೆಗಳಿಗೆ ಮುಕ್ತವಾಗಿ ಲಸಿಕೆ ಮಾರಾಟ ಮಾಡಲು ಒಪ್ಪಿಗೆ ನೀಡಿದ್ದರು. ಇದಾದ ಬಳಿಕ ‘ಪ್ರಧಾನಿ‘ ನಡೆಯನ್ನು ಸೀರಂ ಸಂಸ್ಥೆ ಸಿಇಒ ಆಡಾರ್ ಪೂನಾವಾಲ ಸ್ವಾಗತಿಸಿದ್ದರು. ಇದೇ ವೇಳೆ, ನಾಲ್ಕೈದು ತಿಂಗಳ ಬಳಿಕ ಕೋವಿಶೀಲ್ಡ್ ಲಸಿಕೆ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂಬ ವಿಚಾರವನ್ನೂ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಿಳಿಸಿದೆ.