ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

ವೈದ್ಯೆಗೆ ಸಿಕ್ಕಿತ್ತು ಸಾವಿನ ಮುನ್ಸೂಚನೆ; ಫೇಸ್​ಬುಕ್​ನಲ್ಲಿ ವಿದಾಯದ ಮೆಸೇಜ್ ಹಾಕಿದ ಮರುದಿನವೇ ಸಾವು

ಮುಂಬೈ ಸೇವ್ರಿ ಟಿಬಿ ಆಸ್ಪತ್ರೆಯಲ್ಲಿ ಸೀನಿಯರ್ ಮೆಡಿಕಲ್ ಆಫಿಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಮನೀಶಾ ಜಾಧವ್ ಅವರು ಸೋಮವಾರ ಕೋವಿಡ್​ನಿಂದ ಮೃತಪಟ್ಟಿದ್ದಾರೆ. ಎರಡು ದಿನ ಮೊದಲು ಅವರು ತಮ್ಮ ಸಾವಿನ ಸಾಧ್ಯತೆ ಬಗ್ಗೆ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು.

  • News18
  • Last Updated: April 21, 2021, 1:51 PM IST

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ವಿಪರೀತವಾಗಿ ಹಬ್ಬುತ್ತಿದ್ದು, ಅಲ್ಲಿನ ವೈದ್ಯಕೀಯ ಸಿಬ್ಬಂದಿ ಅಕ್ಷರಶಃ ಅಪಾಯಕ್ಕೆ ಸಿಲುಕಿದ್ದಾರೆ. ಅಲ್ಲಿನ ಹಿರಿಯ ವೈದ್ಯೆಯೊಬ್ಬರು ಸೋಮವಾರ ಕೋವಿಡ್​ಗೆ ಬಲಿಯಾಗಿದ್ಧಾರೆ. ಆದರೆ, ಇವರು ಸಾವಿಗೆ ಮುನ್ನ ಫೇಸ್​ಬುಕ್​ನಲ್ಲಿ ಹಾಕಿದ ಪೋಸ್ಟ್ ಈಗ ವೈರಲ್ ಆಗಿದೆ. 51 ವರ್ಷದ ಮನಿಶಾ ಜಾಧವ್ ಎಂಬ ವೈದ್ಯೆ ಶನಿವಾರ ತನ್ನ ಫೇಸ್​ಬುಕ್​ನಲ್ಲಿ ಸಾವಿನ ಸಾಧ್ಯತೆಯನ್ನು ಸ್ಪಷ್ಟವಾಗಿ ತಿಳಿಸಿ ಪೋಸ್ಟ್ ಹಾಕಿದ್ದರು. ಇದು ನನ್ನ ಕೊನೆಯ ಗುಡ್ ಮಾರ್ನಿಂಗ್ ಆಗಿರಬಹುದು. ಈ ವೇದಿಕೆಯಲ್ಲಿ ಮತ್ತೆ ನಾನು ನಿಮಗೆ ಸಿಗದೇ ಹೋಗಬಹುದು ಎಂದು ಮುಂಬೈನ ಸೇವ್ರಿ ಟಿಬಿ ಆಸ್ಪತ್ರೆಯಲ್ಲಿ ಹಿರಿಯ ವೈದ್ಯಾಧಿಕಾರಿ ಆಗಿದ್ದ ಡಾ. ಮನೀಶಾ ಜಾಧವ್ ಬರೆದಿದ್ದ ಕೊನೆಯ ಅಕ್ಷರಗಳಾಗಿದ್ದವು. ದೇಹ ಸಾಯುತ್ತದೆ, ಆದರೆ ಆತ್ಮ ಸಾಯುವುದಿಲ್ಲ ಎಂದೂ ಅವರು ಬರೆದುಕೊಂಡಿದ್ದು ಅನೇಕರಿಗೆ ಆತಂಕ ತಂದಿತ್ತು. ಆದರೆ, ಎರಡು ದಿನಗಳ ಬಳಿಕ ಅವರು ಕೋವಿಡ್ ಸೋಂಕಿನಿಂದ ಚೇತರಿಕೆ ಕಾಣದೇ ಮೃತಪಟ್ಟಿದ್ದಾರೆ.


“ಇದು ಕೊನೆಯ ಗುಡ್ ಮಾರ್ನಿಂಗ್ ಆಗಿರಬಹುದು. ಈ ಪ್ಲಾಟ್​ಫಾರ್ಮ್​ನಲ್ಲಿ ಮತ್ತೆ ನಾನು ನಿಮಗೆ ಸಿಗದೇ ಹೋಗಬಹುದು. ಎಲ್ಲರೂ ಹುಷಾರಾಗಿರಿ. ದೇಹ ಸಾಯುತ್ತದೆ. ಆತ್ಮಕ್ಕೆ ಸಾವಿಲ್ಲ. ಆತ್ಮ ಚಿರಸ್ಥಾಯಿ” ಎಂದು ಡಾ. ಮನೀಶಾ ಜಾಧವ್ ತನ್ನ ಫೇಸ್​ಬುಕ್ ಅಕೌಂಟ್​ನಲ್ಲಿ ಹಾಕಿದ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದರು. ಅವರ ಸಾವಿನ ಬಳಿಕ ಅನೇಕ ಜನರು ಅವರ ಫೇಸ್​ಬುಕ್ ಪೋಸ್ಟ್​ಗೆ ಪ್ರತಿಕ್ರಿಯಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.



ಮಹಾರಾಷ್ಟ್ರದಲ್ಲಿ ಸರ್ಕಾರಿ ವೈದ್ಯಕೀಯ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಿದ ವೈದ್ಯರೊಬ್ಬರು ಬಲಿಯಾಗಿದ್ದು ಇದೇ ಮೊದಲು. ಅಲ್ಲಿ 18 ಸಾವಿರ ವೈದ್ಯರಿಗೆ ಕೋವಿಡ್ ಸೋಂಕು ತಗುಲಿದೆ. 168 ಡಾಕ್ಟರ್​ಗಳು ಸಾವನ್ನಪ್ಪಿದ್ದಾರೆ. ಆದರೆ, ಸರ್ಕಾರಿ ವೈದ್ಯಾಧಿಕಾರಿ ಮೃತಪಟ್ಟಿರುವುದು ಇದೇ ಮೊದಲ ಘಟನೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿಯಲ್ಲಿ ಹೇಳಲಾಗಿದೆ.



ಡಾ. ಮನೀಶಾ ಜಾಧವ್ ಅವರು ಚಿಕಿತ್ಸೆ ಮತ್ತು ಆಡಳಿತ ಎರಡೂ ವಿಭಾಗದಲ್ಲಿ ನುರಿತ ವ್ಯಕ್ತಿಯಾಗಿದ್ದರು. ಬಹಳ ಚೆನ್ನಾಗಿ ಜವಾಬ್ದಾರಿಗಳನ್ನ ನಿಭಾಯಿಸುತ್ತಿದ್ದರೆಂದು ತಿಳಿದುಬಂದಿದೆ. ದುರದೃಷ್ಟಕ್ಕೆ ಜನರ ಜೀವ ರಕ್ಷಣೆಯ ಕಾಯಕ ಮಾಡುತ್ತಿದ್ದ ಅವರು ತಮ್ಮ ಪ್ರಾಣಪಕ್ಷಿ ಹಾರಿಹೋಗುವುದನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಅಂತೆಯೇ, ಕೋವಿಡ್ ಎಂಬುದು ಕ್ರೂರ ಮಹಾಮಾರಿಯಾಗಿದೆ.

Published by: Vijayasarthy SN
First published: April 21, 2021, 1:51 PM IST