- News18 Kannada
- Last Updated: April 25, 2021, 10:57 PM IST
ಚೆನ್ನೈ (ಏಪ್ರಿಲ್ 25); ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ. ಹಲವು ನಿರ್ಬಂಧಗಳ ನಡುವೆಯೂ ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ. ಏಪ್ರಿಲ್ 4 ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14 ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಹಾಗೂ ಏಪ್ರಿಲ್ 17 ರಿಂದ ದಿನ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೋನಾ ಸೋಂಕು ಪೀಡಿತರಾಗುತ್ತಿದ್ದಾರೆ. ಆದರೆ, ಕೊರೋನಾ ಸೋಂಕಿತರಿಗೆ ಆಮ್ಲಜನಕ ಸೇರಿದಂತೆ ಸೂಕ್ತ ಸೌಲಭ್ಯವನ್ನು ನೀಡುವುದು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾವು ಭಾರತದ ಸ್ನೇಹಿತರ ನೆರವಿಗೆ ನಿಲ್ಲುತ್ತೇವೆ ಎಂದು ಹೇಳುವ ಮೂಲಕ ಅಮೆರಿಕ ಭಾರತಕ್ಕೆ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯ ಹಸ್ತ ಚಾಚಲು ಮುಂದಾಗಿದೆ.
The U.S. is deeply concerned by the severe COVID outbreak in India. We are working around the clock to deploy more supplies and support to our friends and partners in India as they bravely battle this pandemic. More very soon.
— Jake Sullivan (@JakeSullivan46) April 25, 2021
ಚೆನ್ನೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಈ ಸಂಬಂಧ ಇಂದು ಟ್ವೀಟ್ ಮೂಲಕ ಅಧಿಕೃತ ಪ್ರಕಟಣೆ ಹೊರಡಿಸಿದ್ದು, "ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಭಾರತ ಈ ಸಾಂಕ್ರಾಮಿಕ ರೋಗವನ್ನು ಧೈರ್ಯದಿಂದ ಎದುರಿಸಬೇಕಿದೆ. ಭಾರತದ ಸ್ನೇಹಿತರಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ಮೂಲಕ ಸಹಾಯ ಹಸ್ತ ಚಾಚಲು ಅಮೆರಿಕ ಸಿದ್ದವಾಗಿದೆ" ಎಂದು ತಿಳಿಸಲಾಗಿದೆ.
Spoke today with National Security Advisor Ajit Doval about the spike in COVID cases in India and we agreed to stay in close touch in the coming days. The United States stands in solidarity with the people of India and we are deploying more supplies and resources: pic.twitter.com/yDM7v2J7OA
— Jake Sullivan (@JakeSullivan46) April 25, 2021
ಅಮೆರಿಕದ ಅಧಿಕಾರಿ ಜೇಕ್ ಸುಲ್ಲಿವಾನ್ ಈ ಬಗ್ಗೆ ಟ್ವೀಟ್ ಮಾಡಿದ್ದು, "ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಇಂದು ಮಾತನಾಡಿದ್ದೇವೆ ಮತ್ತು ಮುಂಬರುವ ದಿನಗಳಲ್ಲಿ ನಿಕಟ ಸಂಪರ್ಕದಲ್ಲಿರಲು ನಾವು ಒಪ್ಪಿದ್ದೇವೆ. ಯುನೈಟೆಡ್ ಸ್ಟೇಟ್ಸ್ ಭಾರತದ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದೆ ಮತ್ತು ನಾವು ಹೆಚ್ಚಿನ ಸರಬರಾಜು ಮತ್ತು ಸಂಪನ್ಮೂಲಗಳನ್ನು ಭಾರತಕ್ಕೆ ನಿಯೋಜಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಕೋವಿಡ್ ಸ್ಥಿತಿಗತಿ:
ಭಾರತದಲ್ಲಿ ಶನಿವಾರ 3,49,691 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 2,17,113 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,69,60,172ಕ್ಕೆ ಏರಿಕೆ ಆಗಿದೆ. ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ. ಶನಿವಾರ 2,767 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 1,92,311ಕ್ಕೆ ಏರಿಕೆ ಆಗಿದೆ. ಈವರೆಗೆ ದೇಶಾದ್ಯಂತ ಒಟ್ಟು 14,09,16,417 ಜನರಿಗೆ ಲಸಿಕೆ ಹಾಕಲಾಗಿದೆ.
ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಅದಾದ ಬಳಿಕ ಅದು ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಈವರೆಗಿನ ದಾಖಲೆ ಆಗಿತ್ತು.
ಈ ನಡುವೆ ಆಮ್ಲಜನಕದ ಕೊರತೆ ದೇಶದಾದ್ಯಂತ ತಲೆದೋರಿದ್ದು, ಹೊಸ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿರುವ ಪ್ರಧಾನಮಂತ್ರಿ ಸಚಿವಾಲಯ, "ದೇಶದ ಹಲವು ಸ್ಥಳಗಳಲ್ಲಿ ಆಕ್ಸಿಜನ್ ಕೊರತೆಯ ವರದಿಗಳು ಹೆಚ್ಚಾಗುತ್ತಿರುವ ಕಾರಣ, ಜೀವ ಉಳಿಸುವ ಅನಿಲದ ಲಭ್ಯತೆಯನ್ನು ಹೆಚ್ಚಿಸಲು ದೇಶಾದ್ಯಂತ ಸಾರ್ವಜನಿಕ ಆರೋಗ್ಯ ಸೌಲಭ್ಯ ಘಟಕಗಳಲ್ಲಿ 500 ಕ್ಕೂ ಹೆಚ್ಚು ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುವುದು" ಎಂದು ಸ್ಪಷ್ಟಪಡಿಸಿದೆ.
551 ಸ್ಥಾವರಗಳ ಸ್ಥಾಪನೆಗೆ ಹಣ ಹಂಚಿಕೆ ಮಾಡಲು ಪಿಎಂ ಕೇರ್ಸ್ ಫಂಡ್ ತಾತ್ವಿಕವಾಗಿ ಅನುಮೋದನೆ ನೀಡಿದೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಭಾನುವಾರ ತಿಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟಕಗಳನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕು ಎಂದು ನಿರ್ದೇಶಿಸಿದ್ದಾರೆ ಎಂದು ತಿಳಿಸಿದೆ.
ಈ ಆಮ್ಲಜನಕ ಉತ್ಪಾದನಾ ಘಟಕಗಳು ಜಿಲ್ಲಾ ಮಟ್ಟದಲ್ಲಿ ಆಮ್ಲಜನಕದ ಲಭ್ಯತೆಗೆ ಪ್ರಮುಖ ಉತ್ತೇಜನ ನೀಡುತ್ತವೆ ಎನ್ನಲಾಗಿದೆ. ಈ ಮೀಸಲಾದ ಸ್ಥಾವರಗಳನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜಿಲ್ಲಾ ಕೇಂದ್ರಗಳಲ್ಲಿ ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುವುದು. ಅವುಗಳ ಹೊಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಕ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.